ಮೈಸೂರು: ಜನರ ಭಾವನೆಗಳನ್ನು ಕ್ರೋಢೀಕರಿಸಿ ಆಳುವ ವರ್ಗಕ್ಕೆ ತಲುಪಿಸಿದಾಗ ಮಾತ್ರ ದೇಶದಲ್ಲಿ ಗೋಹತ್ಯೆ ನಿಷೇಧ ಸಾಧ್ಯವಾಗಬಹುದು ಎಂದು ರಾಮಚಂದ್ರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಮೈಸೂರು ಜಿಲ್ಲಾ ಗೋ ಪರಿವಾರದ ವತಿಯಿಂದ ನಗರದ ಸರಸ್ವತಿಪುರಂನ ವಿಜಯವಿಠಲ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದ ಅವರು, ದೇವರು ಒಬ್ಬೊಬ್ಬರಾಗಿ ಹೋರಾಡಿದಾಗ ಮಹಿಷಾಸುರ ಮರ್ಧನ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಂತರ ಎಲ್ಲಾ ದೇವರುಗಳ ಅಂತರಂಗಗಳು ಸೇರಿ, ಆವೀರ್ಭವಿಸಿದ ಜಗನ್ಮಾತೆ ಮಹಿಷಾಸುರನನ್ನು ಮರ್ದಿಸಿದಳು.
ಈ ನಿಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ ದೊರೆತ ನಂತರ ದೇಶದಲ್ಲಿ ಗೋ ಹತ್ಯೆ ಪ್ರಮಾಣ ಹೆಚ್ಚಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ನಡೆಯದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಒಗ್ಗೂಡಿಸಿ, ಅಕ್ಷರರೂಪದಲ್ಲಿ ಬ್ರಹ್ಮಾಸ್ತ್ರವಾದರೆ ಮಾತ್ರ ದೇಶದಲ್ಲಿ ಗೋಹತ್ಯೆ ನಿಷೇಧ ಸಾಧ್ಯ ಎಂದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಡುವ ಸಂದರ್ಭದಲ್ಲಿ ಸುಭಾಷ್‌ಚಂದ್ರ ಬೋಸ್ ಅವರು ನಮಗೆ ರಕ್ತ ಕೊಡಿ, ನಾವು ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದಿದ್ದರು. ಆದರೆ ನಮಗೆ ಕೇವಲ ಸಾರ್ವಜನಿಕರು ಹಸ್ತಾಕ್ಷರ ನೀಡಿದರೆ, ನಾವು ಗೋಹತ್ಯೆ ನಿಷೇಧ ಜಾರಿಗೊಳಿಸುತ್ತೇವೆ.
ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಅಭಯಾಕ್ಷರ ಅರ್ಜಿಗಳು ಪ್ರತಿ ಮನೆ-ಮನಗಳನ್ನು ತಲುಪಬೇಕಿದ್ದು, ಇದಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ವ್ಯವಸ್ಥಿತವಾಗಿ ಸಹಿ ಸಂಗ್ರಹಿಸಲು ತಾಲೂಕು, ಗ್ರಾಮಗಳಲ್ಲಿ ಶ್ರಮಿಸಬೇಕು. ರಾಮಮಂದಿರ ನಿರ್ಮಾಣಕ್ಕಾಗಿ ಪ್ರತಿ ಹಳ್ಳಿಗಳಿಂದ ಇಟ್ಟಿಗೆ ಸಾಗಿದಂತೆ, ಗೋವಿನ ರಕ್ಷಣೆಗಾಗಿ ಸಂಗ್ರಹಿಸಿದ ಅಭಯಾಕ್ಷರದ ಭವ್ಯ ಮೆರವಣಿಗೆ ಗೋಯಾತ್ರೆ ವೇಳೆ ನಡೆಯಲಿದೆ.
ಗೋವುಗಳ ಬಗ್ಗೆ ಪ್ರೇಮವಿರುವ ಎಲ್ಲರೂ ಗೋವುಗಳ ರಕ್ಷಣೆಗಾಗಿ ನಡೆಯುವ ಅಭಯಾಕ್ಷರಕ್ಕಾಗಿ ಶಕ್ತಿಮೀರಿ ಶ್ರಮಿಸಬೇಕಿದೆ ಎಂದು ಹೇಳಿದರು. ಭಾರತೀಯ ಗೋ ಪರಿವಾರದ ರಾಜಾÂಧ್ಯಕ್ಷ ಪಾಂಡುರಂಗ ಮಹಾರಾಜ್, ಡಾ.ಬಾನುಪ್ರಕಾಶ್ ಪಂಡಿತ್ ಇತರರಿದ್ದರು.