Advertisement

ಭಕ್ತರ ಭಾವನೆ ಅರಿತು ಪ್ರಸಾದ ನೀಡಿ: ಅದಮಾರು ಶ್ರೀ

07:20 AM Sep 18, 2017 | Team Udayavani |

ಪಡುಬಿದ್ರಿ: ಮಂತ್ರ ತಂತ್ರಗಳ ಜತೆ ಭಾವುಕತನ ಸೇರಿದರೆ ಬಂಗಾರದ ಪುಷ್ಪಕ್ಕೆ ಪರಿಮಳ ಬರುವಂತೆ ದೇವರು ನಮಗೆ ಮೌಲ್ಯವನ್ನು ಕೊಡುತ್ತಾನೆ. ಭಕ್ತರ ಭಾವನೆಗಳನ್ನು ಅರಿತುಕೊಂಡು ದೇವರನ್ನು ಪೂಜಿಸಿ ಪರಮ ಪ್ರಸಾದವನ್ನು ಕರುಣಿಸುವ ಅರ್ಚಕರು ಸಂಸ್ಕೃತ, ವೇದಾಧ್ಯಯನಗಳನ್ನೂ ಮುಂದುವರಿಸಬೇಕು. ಅರ್ಚಕರಿಗೆ ಸರಕಾರಿ  ಸಂಬಳವು ಹೆಚ್ಚಾಗಬೇಕು. ಎಲ್ಲರಂತೆ ಅವರೂ ಸಮಾಧಾನ ಚಿತ್ತದಿಂದ ಕುಟುಂಬ ಜೀವನ ಸಾಗಿಸುವಂತಾಗಬೇಕು ಎಂದು ಉಡುಪಿ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ರವಿವಾರ ಶ್ರೀ ಕ್ಷೇತ್ರದ ಎಲ್ಲೂರಿನ ಸಭಾಭವನದಲ್ಲಿ ವೇದಾಗಮ ಪೌರೋಹಿತ್ಯ ಪ್ರತಿ ಷ್ಠಾನಮ್‌ ಪ್ರಾಯೋಜಕತ್ವದಲ್ಲಿ ರಾಜ್ಯ ಧಾರ್ಮಿಕ ಪರಿಷತ್‌, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಹಾಗೂ ಶ್ರೀ ಕ್ಷೇತ್ರ ಎಲ್ಲೂರಿನ ವ್ಯವಸ್ಥಾಪನ ಸಮಿತಿ ಸಹಯೋಗದಲ್ಲಿ ಸೆ. 7ರಿಂದ ಸೆ. 17ರ ಪರ್ಯಂತ ನಡೆದ‌ ಉಡುಪಿ ಜಿಲ್ಲೆಯ ಮುಜರಾಯಿ ದೇವಸ್ಥಾನಗಳ ಅರ್ಚಕರ ತರಬೇತಿ ಶಿಬಿರ(ಜ್ಞಾನಸತ್ರ)ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮಾಹಿತಿಯ ಕಣಜವಾಗಿ ಶಿಬಿರ ಯಶಸ್ವಿ
ಮಾಹಿತಿಯ ಕಣಜವಾಗಿ ಅರ್ಚಕರ ಈ ಶಿಬಿರವು ಯಶಸ್ವಿಯಾಗಿದೆ. ಅರ್ಚಕರು ಸದಾಚಾರ, ಸದ್ವಿಚಾರಗಳನ್ನು ಬೆಳೆಸಿಕೊಳ್ಳಿ. ನಿಮ್ಮ ವೈಯಕ್ತಿಕ ಜೀವನ ಪರಿಶುದ್ಧವಾಗಿರಲಿ. ಹಾಗಾದಾಗ ನಿಮ್ಮ ಔನ್ನತ್ಯವೂ ಸಾಧ್ಯ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಮನಃಶಾಂತಿ ನೀಡುವ ತಾಣವಾಗಲಿ
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಸ್‌.ಪಿ. ಷಡಕ್ಷರೀ ಸ್ವಾಮಿ ಮಾತನಾಡಿ, ದೇವರು ಮತ್ತು ಧರ್ಮ ಅತ್ಯಂತ ಪವಿತ್ರವಾದ ಕಲ್ಪನೆ. ಧಾರ್ಮಿಕ ಸಂಸ್ಥೆಗಳಿಂದ ದೇವರ ಹೆಸರಿನಲ್ಲಿ ಭಯವನ್ನು ಹುಟ್ಟಿಸುವುದು, ಕ್ಷೊàಭೆಗೊಳಗಾದವ
ರನ್ನು ಮತ್ತಷ್ಟು ಕ್ಷೊàಭೆಗೊಳಪಡಿಸುವಂತಹ ಕೆಲಸ ಆಗಬಾರದು ಎಂದರು.

ದೇವರಿದ್ದಾನೆ ಎಂಬ ನಂಬಿಕೆಯನ್ನು ಬಳಸಿಕೊಂಡು ಶೋಷಣೆಗೆ ಅವಕಾಶ ನೀಡದೇ ಭಕ್ತರಿಗೆ ಮನಃಶಾಂತಿಯನ್ನು ನೀಡುವ ತಾಣಗಳು ಧಾರ್ಮಿಕ ಕೇಂದ್ರಗಳಾಗಬೇಕು. ಸಮಾಜವನ್ನು ಸಮನ್ವಯದಿಂದ ಸಾಗಿಸುವ ಜವಾಬ್ದಾರಿ ಅರ್ಚ
ಕರದ್ದಾಗಿದೆ. 36,000 ಮುಜರಾಯಿ ದೇವಸ್ಥಾನಗಳಿದ್ದು, ಅನೇಕ ದೇವಸ್ಥಾನಗಳು ಅಸ್ತಿತ್ವದಲ್ಲಿಲ್ಲ. ನಾಲ್ಕಾರು ಹೆಸರುಗಳಲ್ಲಿ ಒಂದೇ ದೇವಸ್ಥಾನ  ತಸ್ತೀಕನ್ನು ಸಹಾ ಪಡೆಯುತ್ತಿದೆ. ಆಡಳಿತದಲ್ಲಿ ಏಕರೂಪತೆ ತರಲಿಕ್ಕಾಗಿ, ವ್ಯವಸ್ಥೆಯ ಸುಧಾರಣೆಗಾಗಿ ಸಮೀಕ್ಷೆಯ ಮೂಲಕ, ಅಧ್ಯಯನ ಮಾಡಿ ಕಾಯ್ದೆ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ. ತಸ್ತೀಕು ಪಾವತಿಗಾಗಿ ಆನ್‌ಲೈನ್‌ ತಂತ್ರಾಂಶ ಸಿದ್ಧವಾಗುತ್ತಿದೆ ಎಂದರು.

ತಸ್ತೀಕು ಮೊತ್ತ ಏರಿಕೆ
ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಸ್ತೀಕು ಮೊಬಲಗನ್ನು 32,000 ರೂ.ಗಳಿಂದ 48,000ಕ್ಕೆ ಏರಿಸಿದ್ದಾರೆ. ಸಮಾಜ ಮತ್ತು ದೇವರ ನಡುವಿನ ಕೊಂಡಿಯಾಗಿರುವ ಅರ್ಚಕರು ದೇವರ ಮತ್ತು ಭಕ್ತರ ಹೃದಯವನ್ನು ಗೆಲ್ಲಬೇಕು. ಉಭಯ ಜಿಲ್ಲೆಗಳಲ್ಲಿ ತಸ್ತೀಕು ಅರ್ಚಕರಿಗೆ ಸಂದಾಯ ಆಗದಿರುವ ಬಗ್ಗೆ ಚರ್ಚೆ ಮಾಡಿ ನ್ಯಾಯ ಒದಗಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

Advertisement

ಶ್ರೀ ಕ್ಷೇತ್ರ ಎಲ್ಲೂರಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ. ಪ್ರಫ‌ುಲ್ಲ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸರಕಾರದ ರಾಜ್ಯ ಹಿರಿಯ ಆಗಮ ಪಂಡಿತ ಪ್ರೊ| ಸಿ.ಎಸ್‌. ಶಿವಕುಮಾರ ಸ್ವಾಮಿ ಆಶಯ ಭಾಷಣ ಮಾಡಿದರು. ಶಿಬಿರದ ಪ್ರಾಚಾರ್ಯ ಶ್ರೀ ಆದಿಚುಂಚನಗಿರಿ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ವೇದ ವಿದ್ವಾಂಸ ವಿದ್ವಾನ್‌ ಗೋವಿಂದ ಭಟ್‌ ಶಿಬಿರದ ಸಂಕ್ಷಿಪ್ತ ವರದಿ ನೀಡಿದರು. ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿದರು.

ಶಿಬಿರಾರ್ಥಿಗಳ ಪರವಾಗಿ ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ಹಾಗೂ ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಅನುಭವಗಳನ್ನು ಹಂಚಿಕೊಂಡರು.

ಸುಮಾ ಷಡಕ್ಷರೀ ಸ್ವಾಮಿ, ಆಯುಕ್ತರ ಆಪ್ತ ಸಹಾಯಕ ಕೃಷ್ಣ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌, ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಪ್ರವೀಣ್‌ ನಾಯ್ಕ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್‌ ಆಗಮ ಪಂಡಿತ ಶ್ರೀಶ ಉಪಾಧ್ಯಾಯ, ಮುಜರಾಯಿ ತಹಶೀಲ್ದಾರರು ಹಾಗೂ ಶ್ರೀ ಕ್ಷೇತ್ರ ಎಲ್ಲೂರಿನ ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ ಕುಮಾರ್‌ ಶೆಟ್ಟಿ, ರಾಜೇಶ್ವರಿ ರಾಘವೇಂದ್ರ ರಾವ್‌ ವೇದಿಕೆಯಲ್ಲಿದ್ದರು.

ರಾಜ್ಯ ಧಾರ್ಮಿಕ ಪರಿಷತ್‌ ಆಗಮ ಪಂಡಿತ, ಶಿಬಿರಾಧಿಕಾರಿ ವೇ| ಮೂ| ಕೇಂಜ ಶ್ರೀ ಶ್ರೀಧರ ತಂತ್ರಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಎಲ್ಲೂರಿನ ಪವಿತ್ರಪಾಣಿ, ಜಾನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರದ ಶಿಷ್ಟಾಚಾರಾಧಿಕಾರಿ ರಾಘವೇಂದ್ರ ರಾವ್‌ ವಂದಿಸಿದರು. 

ಬಿರುದು ಪ್ರದಾನ
ಸಭೆಯಲ್ಲಿ ಆಯುಕ್ತ ಷಡಕ್ಷರೀ ಸ್ವಾಮಿ ದಂಪತಿ ಹಾಗೂ ಶಿಬಿರಾಧಿಕಾರಿ ವೇ| ಮೂ| ಕೇಂಜ ಶ್ರೀ ಶ್ರೀಧರ ತಂತ್ರಿ ಅವರನ್ನು “ವೇದ ವಿಭೂಷಣ’ ಬಿರುದಿನೊಂದಿಗೆ ಪತ್ನಿ ವಿಜಯಲಕ್ಷ್ಮೀ ಸಹಿತ ಗೌರವಿಸಲಾಯಿತು. ಎಲ್ಲೂರು ದೇಗುಲದ ಹಿರಿಯ ಅರ್ಚಕರಾದ ವೇ| ಮೂ| ಶ್ರೀ ಗೋಪಾಲ ಭಟ್‌ ಹಾಗೂ ವೇ| ಮೂ| ಮಂಜರಬೆಟ್ಟು ಶ್ರೀ ಕೃಷ್ಣಮೂರ್ತಿ ಭಟ್‌ ಅವರನ್ನು ಸಮ್ಮಾನಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇಗುಲಕ್ಕೆ ಬೆಳ್ಳಿಯ ಸಮರ್ಪಣೆಯ ಹರಿವಾಣವನ್ನು ಅರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next