Advertisement

ಭಾಷಾನೀತಿ ಅನುಷ್ಠಾನ ವರದಿ ಕೊಡಿ

04:33 PM Jul 24, 2018 | |

ಬಳ್ಳಾರಿ: ರಾಜ್ಯ ಸರ್ಕಾರದ 2015ರ ಭಾಷಾನೀತಿ ಅನುಷ್ಠಾನ ಕುರಿತಂತೆ ಜಿಲ್ಲೆಯಲ್ಲಿ ಎಷ್ಟು ಖಾಸಗಿ ಶಾಲೆಗಳು ಕನ್ನಡವನ್ನು ಪ್ರಥಮ, ದ್ವಿತೀಯ ಭಾಷೆಯನ್ನಾಗಿ ಅಳವಡಿಸಿಕೊಂಡಿವೆ? ಎಷ್ಟು ಶಾಲೆಗಳು ಅಳವಡಿಸಿಕೊಂಡಿಲ್ಲ. ಅಂತಹ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳೇನು? ಎಂಬ ಸಂಪೂರ್ಣ ವರದಿಯನ್ನು ವಾರದೊಳಗೆ ಸಲ್ಲಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ.ಸಿದ್ದರಾಮಯ್ಯ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

2015ರ ಭಾಷಾ ಅನುಷ್ಠಾನ ಕಾಯ್ದೆ ಪ್ರಕಾರ ಅನುದಾನಿತ, ಅನುದಾನ ರಹಿತ, ಎಲ್ಲಾ ಖಾಸಗಿ ಶಾಲೆಗಳಲ್ಲಿ ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಬೋಧನೆ ಮಾಡಲೇಬೇಕು. ಈ ನಿಯಮ ಕಳೆದ ವರ್ಷದಿಂದ ಜಾರಿಗೆ ಬಂದಿದ್ದು, ಈಗ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಠಾನವಾಗಿದೆಯೇ ಎಂಬ ಕುರಿತು ಸಂದೇಹಗಳಿದ್ದು, ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಶ್ರೀಧರನ್‌, ಈವರೆಗೆ ಪರಿಶೀಲನೆ ನಡೆಸಿಲ್ಲ. ಜಿಲ್ಲೆಯಲ್ಲಿ 16 ಸಿಬಿಎಎಸ್‌ಸಿ, 3 ಐಸಿಎಎಸ್‌ಸಿ ಶಾಲೆಗಳಿದ್ದು, ಪರಿಶೀಲಿಸಿ ವರದಿ ನೀಡುವುದಾಗಿ ತಿಳಿಸಿದರು.

ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ) ಜಾರಿಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎದುರಾಗುತ್ತಿದೆ. ಅದಕ್ಕಾಗಿ ಆರ್‌ಟಿಇಯಡಿ ದಾಖಲಾದ ಮಕ್ಕಳಿಗೆ ಸರ್ಕಾರ ಶಾಲೆಗಳಿಗೆ ನೀಡುವ ಅನುದಾನ ಕಡಿತಗೊಳಿಸಿ, ಖಾಸಗಿ ಶಾಲೆಗಳು ಸಾಮಾಜಿಕ ಹೊಣೆಗಾರಿಕೆಯಡಿ ಶಿಕ್ಷಣ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

ಭಾಷೆ ಕಣ್ಣಿಗೆ ಕಂಡಾಗ, ಕಿವಿಗೆ ಕೇಳಿದಾಗ ಮಾತ್ರ ಜೀವಂತವಾಗಿರಲು ಸಾಧ್ಯ. ಪೊಲೀಸ್‌ ಇಲಾಖೆ ಸಹ ತಮ್ಮ ಎಫ್‌ಐಆರ್‌ನಲ್ಲಿ ಕನ್ನಡದಲ್ಲೇ ಬರೆಯಬೇಕು. ತಮಿಳು ಭಾಷಿಕರಂತೆ ಕನ್ನಡಿಗರಲ್ಲೂ ಭಾಷಾ ಇಚ್ಛಾಶಕ್ತಿ ಬರಬೇಕು. ಆದರೆ, ಇಲ್ಲಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಹಿಂದೆ ಸರಿಯುತ್ತಾರೆ. ಭಾಷೆಗೆ ಸಂಬಂಧಿಸಿದಂತೆ ಹಿಂದೆ ರಾಜ್ಯದ ಎಲ್ಲ ಸಂಸದರಿಗೂ ಪತ್ರ ಬರೆಯಲಾಗಿತ್ತು. ಆದರೆ, ಯಾವೊಬ್ಬರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕನ್ನಡ ಶಾಲೆಗಳ ಗುಣಮಟ್ಟ ಅಭಿವೃದ್ಧಿ ಪಡಿಸಲು ಇನ್ನಷ್ಟು ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

Advertisement

ಸರ್ಕಾರಿ ಶಾಲೆಗಳು ಯಾವುದು ಕೂಡ ನಮ್ಮ ಜಿಲ್ಲೆಯಲ್ಲಿ ಮುಚ್ಚುತ್ತಿಲ್ಲ ಎಂದು ಡಿಡಿಪಿಐ ಪ್ರಾಧಿಕಾರದ ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದರು. ಕನ್ನಡ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
 
ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಜಿ.ಸೋಮಶೇಖರ್‌, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ವೀರಶೆಟ್ಟಿ ಗಾರಂಪಳ್ಳಿ ಸೇರಿದಂತೆ ಕನ್ನಡ ಜಾಗೃತಿ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಇದಕ್ಕೂ ಮುಂಚೆ ನಗರದ ಅತಿಥಿ ಗೃಹದಲ್ಲಿ ಕನ್ನಡ ಅನುಷ್ಠಾನ, ಕನ್ನಡಗರಿಗೆ ಉದ್ಯೋಗ ನೀಡಿಕೆ ಕುರಿತು ಅಹವಾಲು ಸ್ವೀಕರಿಸಿದರು.

ತಮಿಳು ಭಾಷಿಕರಂತೆ ಕನ್ನಡಿಗರಲ್ಲೂ ಭಾಷಾ ಇಚ್ಛಾಶಕ್ತಿ ಬರಬೇಕು. ಆದರೆ, ಇಲ್ಲಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಹಿಂದೆ ಸರಿಯುತ್ತಾರೆ. ಭಾಷೆಗೆ ಸಂಬಂಧಿಸಿದಂತೆ ಹಿಂದೆ ರಾಜ್ಯದ ಎಲ್ಲ ಸಂಸದರಿಗೂ ಪತ್ರ ಬರೆಯಲಾಗಿತ್ತು. ಆದರೆ, ಯಾರೊಬ್ಬರಿಂದಲೂ ಪ್ರತಿಕ್ರಿಯೆ ಬರಲಿಲ್ಲ.  ಪ್ರೊ|ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next