ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರಿಗೆ ನೇರವಾಗಿ ಫಲಾನುಭವಿ ಕಾರ್ಡ್ ನೀಡಲು ಒತ್ತಾಯಿಸಿ ನಗರದಲ್ಲಿ ಸೋಮವಾರ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಜಯದೇವ ವೃತ್ತದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಉದ್ಯೋಗ ಖಾತರಿ ಕಾರ್ಮಿಕರು, ಅಶೋಕ ರಸ್ತೆ, ಗಾಂಧಿ ವೃತ್ತ, ಪಿ.ಬಿ. ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಪುನಃ ಜಯದೇವ ವೃತ್ತದಲ್ಲಿ ಸೇರಿ ಬಹಿರಂಗ ಸಭೆ ನಡೆಸಿದರು.
ಖಾತರಿ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ಕೊಡುವಂತೆ ಸರ್ಕಾರ ಆದೇಶಿಸಿ ಒಂದೂವರೆ ವರ್ಷ ಕಳೆದಿದೆ. ಸ್ಮಾರ್ಟ್ ಕಾರ್ಡ್ ಮಾಡಿ ಕೊಡಲು ಕಾರ್ಮಿಕ ಮಂಡಳಿ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಿದ್ದು, ಇದುವರೆಗೂ ಜಿಲ್ಲೆಯ ಯಾವೊಬ್ಬ ಉದ್ಯೋಗ ಖಾತ್ರಿ ಕಾರ್ಮಿಕರಿಗೂ ಸ್ಮಾರ್ಟ್‌ಕಾರ್ಡ್ ದೊರೆತಿಲ್ಲ. ಇದರಿಂದ ಕಾರ್ಮಿಕ ಮಂಡಳಿಯಿಂದ ಯಾವುದೇ ಸೌಲಭ್ಯವನ್ನು ಕಾರ್ಮಿಕರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಖಾತರಿಯ ಅರ್ಹ ಫಲಾನುಭವಿಗಳಿಗೆ ನೇರ ಸ್ಮಾರ್ಟ್‌ಕಾರ್ಡ್ ನೀಡಲು ಕ್ರಮಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಗೆ ಒತ್ತಾಯಿಸಿದರು. ಇದೇ ವೇಳೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಕಾರ್ಮಿಕರಿಗೆ ಮನೆ, ಜಾಗ ಇಲ್ಲ. ಅವರು ಪ್ರಾಥಮಿಕ ಮೂಲ ಸೌಲಭ್ಯಗಳಿಂದಲೇ ವಂಚಿತರಾಗಿದ್ದಾರೆ. ಅಂತಹವರಿಗೆ ಮನೆ ಜೊತೆಗೆ ಮಂಡಳಿಯಿಂದ ದೊರಕಬೇಕಾದ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಯಾವ ಗ್ರಾಮೀಣ ಪ್ರದೇಶದ ಉದ್ಯೋಗ ಖಾತ್ರಿ ಕಾರ್ಮಿಕರ ಹಣವಿದೆಯೋ ಅದರ ಖರ್ಚಿನ ಸೆಸ್ ಕೂಡ ಕಟ್ಟಡ ಕಾರ್ಮಿಕರ ಬೋರ್ಡ್‌ಗೆ ಬರಬೇಕು. ಅದು ಬರದಿದ್ದರೆ ಸರ್ಕಾರ ಹಾಗೂ ಕಾರ್ಮಿಕರಿಗೂ ವಂಚನೆ ಮಾಡಿದಂತೆ. ಈ ವಂಚನೆ ತಡೆಯಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಆವರಗೆರೆ ಚಂದ್ರು, ಉಪಾಧ್ಯಕ್ಷೆ ನಳಿನಾಕ್ಷಿ, ಸಹ ಕಾರ್ಯದರ್ಶಿ ರೇಣುಕಮ್ಮ, ಪ್ರಧಾನ ಕಾರ್ಯದರ್ಶಿ ರಂಗನಾಥ ಹುಣಸೆಕಟ್ಟೆ, ಆವರಗೆರೆ ವಾಸು, ಮಂಜಪ್ಪ, ನಾಗವೇಣಿ, ಚಂದ್ರಪ್ಪ, ಮಂಜಿಬಾಯಿ, ಗುರು ಶಾಂತಮ್ಮ, ಪರಶುರಾಮಪ್ಪ, ದೇವೇಂದ್ರಪ್ಪ, ನಾಗರಾಜಪ್ಪ, ಸೇರಿದಂತೆ ನೂರಾರು ಉದ್ಯೋಗ ಖಾತ್ರಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.