ಉಡುಪಿ: ರಾಜಕಾರಣಿಗಳು ರಾಜಕಾರಣವನ್ನು ಬಿಟ್ಟು ಸಾಹಿತ್ಯ, ಕಲೆ, ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ಸಾಮಾನ್ಯರಂತೆ ಬದುಕಲು ಸಾಧ್ಯ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ರವಿವಾರ ಎಂಜಿಎಂ ಕಾಲೇಜಿನ ರವೀಂದ್ರಮಂಟಪದಲ್ಲಿ ಆಯೋಜಿಸಿದ್ದ ಯುವ ಕಲಾವಿದರ ಪ್ರತಿಭಾ ಪ್ರದರ್ಶನ “ಅಪರಂಜಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪರಂಜಿ ಕಾರ್ಯಕ್ರಮದ ಮೂಲಕ ಯುವ ಪ್ರತಿಭೆಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇದು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ ಆಗಲಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರಕಿದಾಗ ರಾಜ್ಯ, ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಸರಿಗಮಪ ಖ್ಯಾತಿಯ ಡಾ| ಅಭಿಷೇಕ್ ರಾವ್ ಮತ್ತು ರಜತ್ ಮಯ್ಯ, ಚಲನಚಿತ್ರ (ಕೆಜಿಎಫ್) ಹಿನ್ನೆಲೆ ಗಾಯಕಿ ಐರಾ ಆಚಾರ್ಯ, ಇನ್ನೋರ್ವ ಹಿನ್ನೆಲೆ ಗಾಯಕಿ ವೈಷ್ಣವಿ ರವಿ, ರೂಬಿಕ್ಸ್ ಕ್ಯೂಬ್‌ನಲ್ಲಿ ದಾಖಲೆಗೈದಿರುವ ಪೃಥ್ವೀಶ್ ಕೆ., ವೇಗದ ಚಿತ್ರಕಾರ ಪ್ರದೀಶ್ ಕೆ., ಯೋಗಭಂಗಿಯಲ್ಲಿ ದಾಖಲೆಗೈದಿರುವ ತನುಶ್ರೀ ಪಿತ್ರೋಡಿ, ಖ್ಯಾತ ಸ್ಯಾಕೊಪೋನ್ ವಾದಕಿ ಅಂಜಲಿ ಶ್ಯಾನುಭಾಗ್ ಅವರು ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಶ್ರೇಯಸ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿ ಕಾರ್ಯಕ್ರಮ ಸಂಯೋಜಕ ಅವಿನಾಶ್ ಕಾಮತ್ ವಂದಿಸಿದರು.ವಿದ್ಯಾರ್ಥಿಯ ಚಿಕಿತ್ಸೆಗೆ ನೆರವು ಇತ್ತೀಚೆಗೆ ಅಪಘಾತದಲ್ಲಿ ತನ್ನ ಬಲಕೈ ಕಳೆದುಕೊಂಡ ಎಂಜಿಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಅಜಿತ್ ಶೆಟ್ಟಿ ಅವರ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸಲಾಯಿತು.