ಹೂವಿನಹಡಗಲಿ: ರೈತರು ಬೆಳೆಗಳನ್ನುಅತ್ಯಂತ ನಿಷ್ಠೆಯಿಂದ ಬೆಳೆಯುತ್ತಿದ್ದು ಇಳುವರಿ ಪಡೆಯುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ. ಇದು ತುಂಬಾ ನೋವಿನ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಎ.ಎಂ.ಪಿ. ವಾಗೀಶ್ ಹೇಳಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಹೊಳಗುಂದಿಯ ಪ್ರಗತಿಪರ ರೈತ ಈಶ್ವರಗೌಡ್ರು ಇವರ ಜಮೀನಿನಲ್ಲಿ ನವಣೆ ಬೆಳೆಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,ಸರ್ಕಾರ ರೈತರಿಗೆ ಯಾವುದೇ ಸಬ್ಸಿಡಿ ನೀಡದೆ ಬೆಳೆದ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ಕೊಟ್ಟಲ್ಲಿ ಮಾತ್ರ ರೈತರ ಶ್ರಮಕ್ಕೆ ಪ್ರತಿಫಲ ನೀಡಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಚಿನ್ನಪ್ಪಮಲ್ಕಿ ಒಡೆಯರ್, ಕೃಷಿಯಲ್ಲಿ ಬಹಳ ಸಮಸ್ಯೆಗಳಿವೆ. ನಿಜವಾದ ಶ್ರಮ ಜೀವಿ ಎಂದರೆ, ಒಬ್ಬ ರೈತ ಇನ್ನೊಬ್ಬ ಸೈನಿಕ. ಈ ಇಬ್ಬರ ಋಣ ನಮ್ಮೆಲ್ಲರ ಮೇಲಿದೆ. ಆದ್ದರಿಂದ, ರೈತರ ಸಮಸ್ಯೆಗಳಿಗೆ ಅಧಿ ಕಾರಿಗಳು, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಗೌರವಿಸಬೇಕು ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಸ್ತರಣಾ ಮುಂದಾಳುಗಳಾದ ಡಾ. ಸಿ.ಎಂ. ಕಾಲಿಬಾವಿ ಕೇಂದ್ರದ ಚಟುವಟಿಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ನವಣೆ ಬೆಳೆಯ ನವೀನ ತಳಿಗಳು, ತಂತ್ರಜ್ಞಾನಗಳ ಬಳಕೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು. ಕೇಂದ್ರದ ಕೀಟತಜ್ಞರಾದ ಹನುಮಂತಪ್ಪ ಶ್ರೀಹರಿ ನವಣೆ ಬೆಳೆ, ತೊಗರಿ ಹಾಗೂ ಇನ್ನಿತರೆ ಹಿಂಗಾರಿ ಬೆಳೆಗಳಲ್ಲಿ ಬರುವ ಕೀಟ ಮತ್ತು ರೋಗಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಹೊಳಗುಂದಿ ಪ್ರಗತಿಪರ ರೈತರಾದ ಎಂ. ಹಿರೇಗೌಡ್ರು ಮಾತನಾಡಿ, ಅನ್ನದಾನ ಸ್ವಾಮಿ ಹಾಗೂ ಇಟಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಸೌಜನ್ಯ ಭಾಗವಹಿಸಿ ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆ ನೀಡುವುದರ ಜತೆಗೆ ಕೃಷಿ ಇಲಾಖೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಹೊಳಗುಂದಿ, ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ರೈತರು ಭಾಗವಹಿಸಿ ಕೃಷಿಯಲ್ಲಿ ಬರುವ ಸಮಸ್ಯೆಗಳ ಕುರಿತು ಚರ್ಚಿಸಿ ಸಲಹೆ ಪಡೆಯುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕೇಂದ್ರದ ಮಣ್ಣು ತಜ್ಞರಾದ ಡಾ.ಮಂಜುನಾಥ ಭಾನುವಳ್ಳಿ ನಿರೂಪಿಸಿದರು.