Advertisement

ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕೊಡಿ

12:30 PM Oct 20, 2017 | |

ತಿ.ನರಸೀಪುರ: ಸಮಾಜ ಕಲ್ಯಾಣ ಹಾಗೂ ಡಿ.ದೇವರಾಜ ಅರಸು ಹಿಂ.ವರ್ಗಗಳ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಅಧಿಕಾರಿಗಳಿಗೆ ಹಾಗೂ ನಿಲಯ ಪಾಲಕರಿಗೆ ಸಂಸದ ಆರ್‌.ಧ್ರುವನಾರಾಯಣ ಸೂಚನೆ ನೀಡಿದರು.

Advertisement

ಪಟ್ಟಣದ ಹಳೇ ಸಂತೇ ಮಾಳದ ಸಮಾಜ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂ.ವರ್ಗಗಳ ಇಲಾಖೆ ಮಹಿಳಾ ವಿದ್ಯಾರ್ಥಿ ನಿಲಯಗಳು, ನಂಜನಗೂಡು ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

 ಮುಖ್ಯಸ್ಥ ಅಧಿಕಾರಿ ಮತ್ತು ನಿಲಯ ಪಾಲಕರ ನಡುವೆ ಸಮನ್ವಯತೆ ಇರಬೇಕು. ಸಿಬ್ಬಂದಿಗಳು ಕರ್ತವ್ಯಲೋಪವೆಸಗದೆ ವಿದ್ಯಾರ್ಥಿಗಳ ಗುಣಮಟ್ಟದ ಆಹಾರ ಸಿದ್ಧಪಡಿಸಿಕೊಡಬೇಕೆಂದು ತಾಕೀತು ಮಾಡಿದರು.

ಸರ್ಕಾರ ದಲಿತರು ಮತ್ತು ಹಿಂ.ವರ್ಗಗಳ ಸಮುದಾಯಗಳ ಬಡವರ ಮಕ್ಕಳಿಗೆ ಶೈಕ್ಷಣಿಕ ವ್ಯಾಸಂಗಕ್ಕೆ ನೀಡುವ ಅನುದಾನ ಸದ್ಬಳಕೆಯಾಗಬೇಕಾದರೆ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಸಮರ್ಪಕವಾಗಿ ಲಭ್ಯವಾಗಬೇಕು. ನಿಲಯದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳಬೇಕು.

ಸೋಲಾರ್‌ ದುರಸ್ಥಿಗೊಳಿಸಿ ಬಿಸಿನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹಾಸಿಗೆ, ಹೊದಿಕೆ ಸೇರಿದಂತೆ ವಿದ್ಯುತ್‌ ದೀಪಗಳ ಸೌಲಭ್ಯ ಮಾಡಿಕೊಡಬೇಕು. ಸಾಧ್ಯವಾದಷ್ಟು ವಿದ್ಯಾರ್ಥಿಗಳಿಂದ ದೂರುಗಳು ಕೇಳಿ ಬಾರದಂತೆ ಗಮನಹರಿಸಬೇಕು ಎಂದು ತಿಳಿಸಿದರು.

Advertisement

ಅಡುಗೆ ಸಿಬ್ಬಂದಿ ಕಿತ್ತಾಟ: ಮೆಟ್ರಿಕ್‌ ನಂತರ(ಪಿಯುಸಿ)ದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸರಿಯಾಗಿ ಕೆಲಸಕ್ಕೆ ಬಾರದ ಅಡುಗೆ ಸಿಬ್ಬಂದಿಗಳ ಕಿತ್ತಾಟದಿಂದ ಅಡುಗೆ ರುಚಿ ಕಳೆದುಕೊಂಡಿದೆ ಎಂದು ವಿದ್ಯಾರ್ಥಿಗಳು ಸಂಸದರಿಗೆ ದೂರಿದರು. ಒಬ್ಬರು ಬಂದರೆ, ಮತ್ತೂಬ್ಬರು ಬರಲ್ಲ.

ಆರೋಪ ಪ್ರತ್ಯಾರೋಪ ಮಾಡುತ್ತಾ ಕೆಲಸವನ್ನು ಮಾಡಲ್ಲವೆಂದು ಆರೋಪಿಸಿದ್ದರಿಂದ ಆರ್‌.ಧ್ರುವನಾರಾಯಣ ಕರ್ತವ್ಯಲೋಪದ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳದಲ್ಲಿಯೇ ಇದ್ದ ತಾಪಂ ಇಒ ಬಿ.ಎಸ್‌.ರಾಜು ಅವರಿಗೆ ಸೂಚಿಸಿದರು.

ಚಾ.ನಗರ ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ಸಿ.ರಾಜಶೇಖರ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದಿವಾಕರ, ನಿಲಯಪಾಲಕರಾದ ರೂಪಾ, ಕಮಲಾಕ್ಷಿ, ನಾಗರಾಜಮ್ಮ, ಮಹೇಶ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next