Advertisement

ಲಿಂಗಾಯತ ಧರ್ಮಕ್ಕೆ ಶಾಸನಬದ್ಧ ಮಾನ್ಯತೆ ಕೊಡಿ

12:27 PM Jul 29, 2017 | |

ಬಳ್ಳಾರಿ: ಲಿಂಗಾಯತ ಧರ್ಮಕ್ಕೆ ಶಾಸನಬದ್ಧ ಮಾನ್ಯತೆ ನೀಡಲು ಮತ್ತು ಅಲ್ಪಸಂಖ್ಯಾತ ಆಯೋಗದ ಮಾನ್ಯತೆಯನ್ನೂ ದೊರಕಿಸಿಕೊಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಲಿಂಗಾಯತ ಧರ್ಮ ಮಹಾಸಭಾ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಮುಖ್ಯಸ್ಥ ಮ.ನಿ.ಪ್ರ. ಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಮುಖ್ಯಸ್ಥೆ ಶರಣೆ ಶಾರದಮ್ಮನವರ ನೇತೃತ್ವದಲ್ಲಿ ಪ್ರತಿಭಟನಾಕಾರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಸಮಾಜ ಮುಖಂಡರು, 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ತತ್ವದ ತಳಹದಿಯ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಲಿಂಗಾಯತ ಧರ್ಮವು ಒಂದು ಸರ್ವಕಾಲಿಕ ಸಮಾನತೆ ಸಾರುವ ಪರಿಪೂರ್ಣ ಧರ್ಮವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ಕಾರ ಕೈಗೊಂಡ ಎಲ್ಲ ಜನಗಣತಿ, ನ್ಯಾಯಾಲಯಗಳ ತೀರ್ಪು, ಸರ್ಕಾರದ ಗೆಜೆಟ್‌, ಸುತ್ತೋಲೆಗಳಲ್ಲಿ ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ ಎಂದೇ ದಾಖಲಿಸಿವೆ. ಆದರೆ, ಸ್ವಾತಂತ್ರ್ಯ ನಂತರ ಲಿಂಗಾಯತ ಧರ್ಮವನ್ನು ಹಿಂದೂ
ಧರ್ಮದ ಭಾಗವೆಂದು ನಮೂದಿಸಿ ಲಿಂಗಾಯತರಿಗೆ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದರು. 

ಈ ನೆಲದಲ್ಲಿ ಜನಿಸಿದ ಬಹುದೊಡ್ಡ ದಾರ್ಶನಿಕ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಶಾಸನಬದ್ಧ ಮಾನ್ಯತೆ ಮತ್ತು ಅಲ್ಪಸಂಖ್ಯಾತರ ಆಯೋಗದ ಮಾನ್ಯತೆ ದೊರೆಯಬೇಕಾದುದು ಸಾಮಾಜಿಕ ನ್ಯಾಯ ಮತ್ತು ಕಾನೂನು ಸಮ್ಮತವಾಗಿದೆ ಎಂದು ಪ್ರತಿಪಾದಿಸಿದರು. ಲಿಂಗಾಯತ ಧರ್ಮದ ಧ್ಯೇಯ ಜಾತಿ, ವರ್ಗ, ವರ್ಣ, ಲಿಂಗ ಬೇಧ ರಹಿತ ಶರಣ ಸಮಾಜ ಮತ್ತು ಕಲ್ಯಾಣ ರಾಜ್ಯವನ್ನು ನಿರ್ಮಿಸುವುದಾಗಿದೆ. ವಚನ ಸಾಹಿತ್ಯವು ನಮ್ಮ ಧರ್ಮ ಗ್ರಂಥವಾಗಿದೆ. ವಚನ ಸಾಹಿತ್ಯ, ಜನಪದ ಸಾಹಿತ್ಯ, ವಿಮಶಾì ಸಾಹಿತ್ಯದಲ್ಲಿ ಬಸವಾದಿ ಶರಣರನ್ನು ಕುರಿತು ನೂರಾರು ಕಾವ್ಯಗಳು, ಸಂಶೋಧನಾ ಕೃತಿಗಳು ರಚಿತವಾಗಿದ್ದು, ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಲು ಬೇಕಾದ ಎಲ್ಲ ಲಕ್ಷಣಗಳು ಮತ್ತು ದಾಖಲೆಗಳನ್ನು ಒದಗಿಸಿಕೊಟ್ಟಿದೆ. ಆದ್ದರಿಂದ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಸ್ವತಂತ್ರ ಧರ್ಮದ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಆಯೋಗದ ಮಾನ್ಯತೆ ಒದಗಿಸಿಕೊಡಲು ರಾಜ್ಯ ಸರ್ಕಾರ ಸೂಕ್ತ ದಾಖಲೆಗಳ ಸಹಿತ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಸತ್ಯನಾರಾಯಣ, ರಾಷ್ಟ್ರೀಯ ಬಸವ ದಳದ ಯುವ ಘಟಕದ ಅಧ್ಯಕ್ಷ ಕೆ.ಸುಧಾಕರ್‌, ಲಿಂಗಾಯತ ಧರ್ಮ ಸಮನ್ವಯ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೆರೆ, ನಿಷ್ಠಿ ರುದ್ರಪ್ಪ, ಎಚ್‌.ಪ್ರಭುದೇವ, ಜಿ.ಆರ್‌.ನಟರಾಜ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು, ಲಿಂಗಾಯತ  ಧರ್ಮ ಮಹಾಸಭಾದ ಕಾರ್ಯಕರ್ತರು ಹಾಗೂ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next