Advertisement
ಇನ್ನು ಕೆಲವರು ಸಾಲದ ಹಣದಲ್ಲಿ ಚಿಲ್ಲರೆ ವ್ಯಾಪಾರ ಮಾಡಿಕೊಂಡು, ಉತ್ತಮ ಜೀವನ ನಡೆಸುತ್ತಿದ್ದಾರೆ. ಒಂದೇ ಒಂದು ಕೊರತೆಯೆಂದರೆ, ಮೊದಲು ನಗರದ ಕೇಂದ್ರ ಭಾಗದಲ್ಲಿದ್ದವರು ಈಗ ನಗರದ ಹೊರವಲಯದಲ್ಲಿದ್ದಾರಷ್ಟೆ. “ನಮ್ಮ ಮೆಟ್ರೋ’ ಯೋಜನೆಗೆ ಮನೆ ಕಳೆದುಕೊಂಡಿದ್ದ ಮಾಗಡಿ ರಸ್ತೆಯ ಬಸವೇಶ್ವರನಗರ ಮತ್ತು ಸಂಪಿಗೆರಸ್ತೆ ನಿಲ್ದಾಣದ ಬಳಿಯ ಜೈಭೀಮನಗರ ಕೊಳಚೆಪ್ರದೇಶಗಳ ಜನರ ಈಗಿನ ಸ್ಥಿತಿ ಇದು.
Related Articles
Advertisement
ಒಟ್ಟಾರೆ ಮೆಟ್ರೋ ಯೋಜನೆ ಪುನರ್ವಸತಿಯಿಂದ ಜೀವನದ ಸ್ಥಿತಿಗತಿಯಲ್ಲಿ ತುಸು ಸುಧಾರಣೆಯಾಗಿದೆ ಎಂದು ಶ್ರೀಗಂಧ ಕಾವೆಲ್‌ನ ಮನೆ ನಂಬರ್ 154 ನಿವಾಸಿ ರಮೇಶ್ ತಿಳಿಸುತ್ತಾರೆ. ಅಂದು ಮನೆ ಕಳೆದುಕೊಂಡಾಗ ಬೇಸರವಾಗಿತ್ತು. ಈಗಲೂ ನೆನಪಿಸಿಕೊಂಡರೆ ಸ್ವಲ್ಪ ನೋವಾಗುತ್ತದೆ. ಆದರೆ, ಮೆಟ್ರೋ ಮೊದಲ ಹಂತ ಪೂರ್ಣಗೊಂಡು, ಅದರಿಂದ ಇಡೀ ನಗರದ ಜನರಿಗೆ ಅನುಕೂಲ ಆಗುತ್ತಿರುವುದನ್ನು ನೆನಪಿಸಿಕೊಂಡಾಗ ಅದೆಲ್ಲಾ ಮರೆತು ಖುಷಿ ಆಗುತ್ತದೆ ಎಂದೂ ಅವರು ಹೇಳಿದರು.
ಅಕ್ಕ-ತಂಗಿ ಮದುವೆ ಮಾಡಿದೆ: ಮಾಗಡಿ ರಸ್ತೆಯಲ್ಲಿ ನಮ್ಮ ಮನೆ ಇತ್ತು. ತೆರವಾದ ನಂತರ ಶ್ರೀಗಂಧ ಕಾವೆಲ್‌ಗೆ ಬಂದೆವು. ನನ್ನ ಮನೆ ನಂಬರ್ 156. ಮನೆ ಮೇಲೆ ಬೆಂಗಳೂರು ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಹತ್ತು ಲಕ್ಷ ರೂ. ಸಾಲ ಪಡೆದು, ಅಕ್ಕ ಮತ್ತು ತಂಗಿಯ ಮದುವೆ ಮಾಡಿದೆ. ಕೆಲವು ಸಣ್ಣ-ಪುಟ್ಟ ಸಾಲವನ್ನೂ ಹಿಂತಿರುಗಿಸಿದೆ. ಈಗ ಕೊಂಚ ನಿರಾಳವಾಗಿದ್ದೇನೆ’ ಎನ್ನುತ್ತಾರೆ ಮೋಹನ್.
ಕೊಳಚೆಪ್ರದೇಶದಲ್ಲಿದ್ದಾಗ ಎರಡು ಮನೆಗಳಿದ್ದವು. ಅದರಲ್ಲಿ ಒಂದನ್ನು 50 ಸಾವಿರ ರೂ.ಗಳಿಗೆ ಲೀಸ್‌ನಲ್ಲಿ ಕೊಟ್ಟಿದ್ದೆ. ಈಗ ಆ ರೀತಿ ಬಾಡಿಗೆ ಅಥವಾ ಭೋಗ್ಯ ಕೊಡಲು ಬರುವುದಿಲ್ಲ. ಇನ್ನು ಈ ಮೊದಲು ನಗರದ ಹೃದಯಭಾಗದಲ್ಲಿದ್ದೆವು. ಈಗ ನಗರದಿಂದ 10-15 ಕಿ.ಮೀ. ದೂರ ಹೋಗಿದ್ದೇವೆ. ಇಲ್ಲಿರುವವರಲ್ಲಿ ಬಹುತೇಕ ಎಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದವರು. ಅವರೆಲ್ಲಾ ನಿತ್ಯ ನಗರಕ್ಕೇ ಬರಬೇಕು. ಇನ್ನು ಕಾಲೊನಿಯಿಂದ ಮುಖ್ಯರಸ್ತೆ 2 ಕಿ.ಮೀ. ದೂರದಲ್ಲಿದೆ.
ಅಲ್ಲಿಗೆ ಕಾಲ್ನಡಿಗೆಯಲ್ಲೇ ಬರಬೇಕಾದ ಅನಿವಾರ್ಯತೆ ಇದೆ. ಇಂತಹ ಕೆಲವು ಕುಂದು-ಕೊರತೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದೂ ಮೋಹನ್ ಹೇಳುತ್ತಾರೆ. ಮೆಟ್ರೋಗಾಗಿ ಮನೆ ಕಳೆದುಕೊಂಡಿದ್ದೇವೆ. ಅದೇ ಮೆಟ್ರೋದಲ್ಲಿ ಕೆಲಸಗಳನ್ನು ನಮಗೆ ನೀಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ರಮೇಶ್ ಎಂಬುವವರು ಒತ್ತಾಯಿಸಿದ್ದಾರೆ.
* ವಿಜಯಕುಮಾರ್ ಚಂದರಗಿ