ಬೆಂಗಳೂರು: ಬರ ಪರಿಹಾರ ಹಾಗೂ ನರೇಗಾ ಯೋಜನೆಯಡಿ ಬಾಕಿ ಇರುವ ವೇತನ ಮತ್ತು ಸಾಮಗ್ರಿ ವೆಚ್ಚದ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.
ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಯವರು ಶನಿವಾರ ಪ್ರಧಾನಿಯವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ವೈಫಲ್ಯದಿಂದ ಉಂಟಾಗಿರುವ ನಷ್ಟ, ಕೊಡಗಿನ ಪ್ರವಾಹ ಮತ್ತು ಭೂ ಕುಸಿತದಿಂದ ಉಂಟಾಗಿರುವ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟು ಹಿಂಗಾರು ನಷ್ಟ ಪರಿಹಾರ ಬಾಬಿ¤ನಡಿ 2064.30 ಕೋಟಿ ರೂ., ನರೇಗಾ ಕೂಲಿ ಬಾಕಿ ಹಣ 1351 ಕೋಟಿ ರೂ. ಬಿಡುಗಡೆಗೆ ಕೋರಿದರು.
ರಾಜ್ಯವು 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಹಾಗೂ ಪ್ರವಾಹ ಮತ್ತು ಭೂಕುಸಿತ ಎದುರಿಸಿದೆ. ಕೊಡಗು ಮತ್ತು ಸಮೀಪದ ಮಲೆನಾಡು ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ, ಭೂ ಕುಸಿತದಿಂದ ಹಾನಿಯುಂಟಾಗಿದೆ. ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ತಲೆದೋರಿ ಸಾಕಷ್ಟು ಬೆಳೆಹಾನಿ ಉಂಟಾಗಿತ್ತು. ಎಸ್ ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 2434 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಶೇ.50 ಕ್ಕೂ ಕಡಿಮೆ ಎಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ.
ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ 188 ಮಿ.ಮೀ. ಮಳೆಯಾಗಬೇಕಾಗಿದ್ದು ಕೇವಲ 96 ಮಿ.ಮೀ. ಮಳೆ ಆಗಿದ್ದು ಉತ್ತರ ಒಳನಾಡಿನಲ್ಲಿ ಶೇ.66 ರಷ್ಟು ಮಳೆಆಗಿತ್ತು. 176 ತಾಲೂಕುಗಳಲ್ಲಿ 156 ತಾಲೂಕುಗಳು ಬರಪೀಡಿತ ಎಂದು ಘೋಷಿಸಿಲಾಗಿದ್ದು ಇದರಲ್ಲಿ 107 ತಾಲೂಕು ತೀವ್ರ, 49 ತಾಲೂಕು ಸಾಧಾರಣ ಎಂದು ಗುರುತಿಸಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟ 32,325 ಕೋಟಿ ರೂ. ಇದು ರಾಜ್ಯದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.
ಹೀಗಾಗಿ, ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ 386 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರದಿಂದ ಬರಬೇಕಿದ್ದ ಬಾಕಿ 1351 ಕೋಟಿ ರೂ. ಸಹ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಕೂಡಲೇ ಬರ ಪರಿಹಾರ ಹಾಗೂ ನರೇಗಾ ಕೂಲಿ ಬಾಕಿ ಬಿಡುಗಡೆ ಮಾಡಬೇಕು.ಬರ
ನಿರ್ವಹಣೆಗೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ನಡಿ 2064.30 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.