ಚಿತ್ರರಂಗದಲ್ಲಿ ಫ್ರಂಟ್ ಲೈನ್, ಬ್ಯಾಕ್ ಲೈನ್ ಎಂಬ ಪದ ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಹೀರೋಗಳ ವಿಷಯದಲ್ಲಿ ಸ್ವಲ್ಪ ಹೆಚ್ಚೇ. ಆ ಹೀರೋ ಫ್ರಂಟ್ ಲೈನ್‌ನಲ್ಲಿದ್ದಾನೆ, ಈ ಹೀರೋ ಬ್ಯಾಕ್ ಲೈನ್‌ನಲ್ಲಿದ್ದಾನೆ … ಎಂಬ ಮಾತು ಆಗಾಗ ಬರುತ್ತಲೇ ಇರುತ್ತದೆ. ಅದು ಹೀರೋಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬರುವ ಮಾತು. ಹಿಟ್ ಸಿನಿಮಾ ಕೊಟ್ಟ, ಅತಿ ಹೆಚ್ಚು ಅಭಿಮಾನಿ ವರ್ಗವನ್ನು ಹೊಂದಿರುವ ಹೀರೋಗಳನ್ನು ಫ್ರಂಟ್‌ಲೆçನ್ ಎಂದು ಪರಿಗಣಿಸುವ ಮಂದಿ ಗಾಂಧಿನಗರದಲ್ಲಿದ್ದಾರೆ. ಅದೇ ಹೀರೋ ಸತತವಾಗಿ ನಾಲ್ಕು ಫ್ಲಾಫ್ ಕೊಟ್ಟರೆ ಆತ “ಬ್ಯಾಕ್ ಲೈನ್’ ಹೀರೋ ಎಂದು ಅದೇ ಗಾಂಧಿನಗರ ಕರೆಯುತ್ತದೆ. ಇತ್ತೀಚೆಗೆ ವಿಜಯ ರಾಘವೇಂದ್ರ ನಾಯಕರಾಗಿರುವ “ರಾಜ ಲವ್ಸ್ ರಾಧೆ’ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಈ ಮಾತು ಒಂದಲ್ಲ, ಎರಡು ಬಾರಿ ಕೇಳಿಬಂತು. ಚಿತ್ರದ ನಿರ್ಮಾಪಕ ಎಚ್.ಎಲ್.ಎನ್.ರಾಜ್, “ವಿಜಯ ರಾಘವೇಂದ್ರ ಅವರು ಒಳ್ಳೆಯ ನಟ. ಡ್ಯಾನ್ಸ್, ಫೈಟ್, ಕಾಮಿಡಿ ಎಲ್ಲವೂ ಚೆನ್ನಾಗಿ ಮಾಡುತ್ತಾರೆ. ಎಲ್ಲರನ್ನು ಬೆಂಬಲಿಸುವ ಗುಣ ಅವರಿಗಿದೆ. ಅವರು ನಿರ್ಮಾಪಕರ ನಟ. ಇಂತಹ ವಿಜಯ ರಾಘವೇಂದ್ರ ಚಿತ್ರರಂಗದಲ್ಲಿ ಫ್ರಂಟ್ ಲೈನ್‌ಗೆ ಬಂದರೆ ಮತ್ತಷ್ಟು ನಿರ್ಮಾಪಕರಿಗೆ ಸಹಾಯವಾಗುತ್ತದೆ’ ಎಂದರು.
ಇದೇ ಮಾತಿಗೆ ಧ್ವನಿಗೂಡಿಸಿದ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಯತಿರಾಜ್, “ನಾನು ಕೂಡಾ 10 ವರ್ಷಗಳಿಂದ ವಿಜಯ ರಾಘವೇಂದ್ರ ಅವರು ಫ್ರಂಟ್‌ಲೈನ್ ಗೆ ಬರಬೇಕೆಂದು ಕಾಯುತ್ತಲೇ ಇದ್ದೇನೆ’ ಎಂದರು. ಈ ರೀತಿಯ ಫ್ರಂಟ್‌ಲೈನ್ ಮಾತು ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ಅಜೇಯ್ ರಾವ್‌ಗೆ ಸರಿ ಕಾಣಿಸಲಿಲ್ಲ. ಹಾಗಾಗಿ, ಮೈಕ್ ಎತ್ತಿಕೊಂಡ ಅಜೇಯ್ ರಾವ್ ಆ ಬಗ್ಗೆ ಫ್ರಂಟ್‌ಲೆçನ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
“ಇಲ್ಲಿ ಫ್ರಂಟ್‌ಲೈನ್‌ಗೆ ಬರಬೇಕು ಅಂದರು. ನನ್ನ ಪ್ರಕಾರ ಚಿತ್ರರಂಗದಲ್ಲಿ ಫ್ರಂಟ್‌ಲೆçನ್, ಬ್ಯಾಕ್‌ಲೈನ್ ಅನ್ನೋದು ಇಲ್ಲ. ಯಶಸ್ಸು, ಸ್ಟಾರ್‌ಗಿರಿ ಇವತ್ತು ಬರುತ್ತೆ, ನಾಳೆ ಹೋಗುತ್ತೆ. ಅದೊಂಥರ ಮಿನಗುವ ನಕ್ಷತ್ರದಂತೆ. ಆದರೆ, ಶಾಶ್ವತವಾಗಿರೋದು ಕಲೆ ಹಾಗೂ ಕಲಾವಿದ. ನಾವು ಕಲಾವಿದನಿಗೆ ಬೆಲೆ ಕೊಡಬೇಕೇ ಹೊರತು ಯಶಸ್ಸಿಗಲ್ಲ. ವಿಜಯರಾಘವೇಂದ್ರ ಅವರು ನನ್ನ ಸೀನಿಯರ್ ನಟ. ನಾನು ಅವರನ್ನು ಗೌರವಿಸುತ್ತೇನೆ. ಸಾಕಷ್ಟು ವಿಭಿನ್ನ ಸಿನಿಮಾಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಯಶಸ್ಸು ನಮ್ಮ ಕೈಯಲ್ಲಿ ಇಲ್ಲ. ನಾನು ಚಿತ್ರರಂಗದ ಫ್ರಂಟ್‌ಲೈನ್, ಬ್ಯಾಕ್‌ಲೈನ್ ವಿಷಯವನ್ನು ನಂಬೋದಿಲ್ಲ.
ನಾನು ಕಲಾವಿದನಿಗಷ್ಟೇ ಬೆಲೆ ಕೊಡೋದು. ಕಲೆಯೇ ಶಾಶ್ವತ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪಕ್ಕದಲ್ಲಿ ಕುಳಿತಿದ್ದ ವಿಜಯ ರಾಘವೇಂದ್ರ ಚಪ್ಪಾಳೆ ತಟ್ಟುವ ಮೂಲಕ ಅಜೇಯ್ ಮಾತನ್ನು ಬೆಂಬಲಿಸಿದರು.