ಸಿಂಧನೂರು: ರೈತರ ಪಂಪ್‌ಸೆಟ್‌ಗಳಿಗೆ 24 ತಾಸುಗಳ ಕಾಲ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿ ಕರ್ನಾಟಕ ಏತ ನೀರಾವರಿ ರೈತರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ರೈತರು ಪಕ್ಷಾತೀತವಾಗಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಿನಿ ವಿಧಾನಸೌಧ ಎದುರು ಬಹಿರಂಗ ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಸರ್ವೋತ್ತಮರೆಡ್ಡಿ ಪಾಟೀಲ, ಹಲವು ವರ್ಷಗಳಿಂದ ಕಾಲುವೆ ಕೊನೆ ಭಾಗದ ರೈತರು ತುಂಗಭದ್ರಾ ಜಲಾಶಯದಿಂದ ಆಂಧ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಂಡು ನೀರಾವರಿ ಮಾಡಿಕೊಂಡಿದ್ದಾರೆ. ಸ್ವತಃ ಎರಡೂಮೂರು ಲಕ್ಷ ಹಣ ಖರ್ಚು ಮಾಡಿ ಪಂಪ್‌ಸೆಟ್ ಹಾಕಿಸಿಕೊಂಡು ತಾವು ಬೆಳೆದ ಬೆಳೆಗಳಿಗೆ ಈ ಮೂಲಕ ನೀರುಣಿಸುತ್ತಿದ್ದಾರೆ.
ಆದರೆ ರಾಜ್ಯ ಸರ್ಕಾರ ನಿರಂತರ ಜ್ಯೋತಿ ಹೆಸರಿನಲ್ಲಿ ಕೇವಲ ಏಳು ತಾಸು ಮಾತ್ರ ವಿದ್ಯುತ್ ಪೂರೈಸುತ್ತಿರುವುದರಿಂಧ ರೈತರಿಗೆ ತೀವ್ರ ತೊಂದರೆಯಾಗಿ ನಷ್ಟ ಅನುಭವಿಸುವಂತಾಗಿದೆ ಎಂದರು.
ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಅಶೋಕ ಭೂಪಾಲ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರೈತರ ಕಷ್ಟವನ್ನರಿತು ನಿರಂತರ ವಿದ್ಯುತ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಈಗ ಹೆಜ್ಜೆ ಇಡುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ 24 ಗಂಟೆಗಳ ವಿದ್ಯುತ್ ಪೂರೈಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಅವರು ಮಾತು ತಪ್ಪಿ ನಡಿಯೋದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರೊಂದಿಗೆ ಚರ್ಚಿಸಿ ಎರಡು ದಿನಗಳಲ್ಲಿ ಈಗಿರುವ 7 ತಾಸು ಜೊತೆಗೆ ಹೆಚ್ಚುವರಿಯಾಗಿ 5 ತಾಸು ಅಂದರೆ 12 ಗಂಟೆ ವಿದ್ಯುತ್ ಕೊಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಚನ್ನಬಸವ ಉಪ್ಪಳ, ರೈತ ಮುಖಂಡರಾದ ಹನುಮನಗೌಡ ಬೆಳಗುರ್ಕಿ, ದಢೇಸುಗೂರು
ಖಾಜಾಸಾಬ ಇದ್ದರು.