Advertisement

ಮಂಡಳಿ, ಚುನಾವಣೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕೊಡಿ: ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರ ಮನವಿ

04:17 PM Aug 07, 2023 | Team Udayavani |

ಬೆಂಗಳೂರು: ನಿಗಮ- ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸೇರಿ ಮುಂಬರುವ ವಿವಿಧ ಚುನಾವಣೆಗಳಲ್ಲಿ ತಮ್ಮ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರಿಂದ ಒಕ್ಕೊರಲ ಕೂಗು ಕೇಳಿಬಂದಿದೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರು, ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯವು ಹಿಂದೆಂದಿಗಿಂತ ಹೆಚ್ಚು ಪಕ್ಷದ ಪರ ನಿಂತಿದೆ. ಸಮುದಾಯದ ಸ್ಥಳೀಯ ನಾಯಕರು, ಕಾರ್ಯಕರ್ತರು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕೆಲವು ಸ್ಥಾನಮಾನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಹತ್ತಾರು ನಿಗಮ-ಮಂಡಳಿಗಳಿಗೆ ನೂತನ ಸರ್ಕಾರ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ ಮಾಡಲಿದೆ. ಲೋಕಸಭಾ ಚುನಾವಣೆ ವರ್ಷವೂ ಇದಾಗಿದ್ದು, ಈ ಮಧ್ಯೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಕೂಡ ನಡೆಯಲಿದೆ. ಮತ್ತೂಂದೆಡೆ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಕೂಡ ಆಗಲಿದೆ. ಅಲ್ಲೆಲ್ಲ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ನಾಯಕರು ಒತ್ತಾಯಿಸಿದರು.

ಪ್ರತಿಸಲ ಸಮುದಾಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನ್ಯಾಯ ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಸಮುದಾಯದ ನಾಯಕರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ ಮುಸ್ಲಿಂ ನಾಯಕರು, ಪಂಚಾಯ್ತಿ ಚುನಾವಣೆಗಳಲ್ಲಿ ಸಮುದಾಯದ ಅಭ್ಯರ್ಥಿಗಳು ಗೆಲುವಿಗೆ ಸ್ಥಳೀಯ ಶಾಸಕರು ಕೂಡ ಶ್ರಮಿಸಬೇಕು. ಈ ಸಂಬಂಧ ಶಾಸಕರುಗಳಿಗೂ ಸೂಚನೆ ನೀಡಬೇಕು ಎಂದು ಒಕ್ಕೊರಲದಿಂದ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ, “ನಿಮ್ಮ (ಸಮುದಾಯದ) ಬೇಡಿಕೆಗಳು ನ್ಯಾಯಯುತವಾಗಿವೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸೂಕ್ತ ಸ್ಥಾನಮಾನಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಸಭೆಯ ನಂತರ ಲೋಕಸಭೆ ಚುನಾವಣೆಯಲ್ಲಿ 2 ಸ್ಥಾನ ನೀಡಬೇಕು ಎಂಬ ಬೇಡಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, “ಅವರ (ಅಲ್ಪಸಂಖ್ಯಾತರ) ಬೇಡಿಕೆಯಂತೆ ಸ್ಥಾನ ನೀಡಬೇಕು. ಅದರಲ್ಲಿ ತಪ್ಪೇನಿದೆ? ಅವರ ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಿ ಅವರು ಗೆಲ್ಲುವ ಅವಕಾಶ ಇರುತ್ತದೆಯೋ ಅಲ್ಲಿ ಟಿಕೆಟ್‌ ನೀಡಲಾಗುವುದು’ ಎಂದು ತಿಳಿಸಿದರು.

Advertisement

ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ. ರೆಹಮಾನ್‌ ಖಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕರಾದ ತನ್ವೀರ್‌ ಸೇಠ್‌, ಎನ್‌. ಹ್ಯಾರಿಸ್‌, ಅಬ್ದುಲ್‌ ಜಬ್ಟಾರ್‌, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮತ್ತಿತರರು ಇದ್ದರು.

ಹೈಕಮಾಂಡ್‌ ನಿರ್ಣಯ ಅಂತಿಮ
ಮೇಲ್ಮನೆಯಲ್ಲಿ ತೆರವಾದ ಕಾಂಗ್ರೆಸ್‌ನ ಮೂರು ಸ್ಥಾನಗಳ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್‌ ನಿರ್ಣಯ ಅಂತಿಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ಈ ವಿಚಾರದಲ್ಲಿ ರಾಜ್ಯಪಾಲರು ವರದಿ ಕೇಳಿರುವ ಕುರಿತು ನಾನು ಚರ್ಚೆ ಮಾಡುವುದಿಲ್ಲ. ಮುಖ್ಯಮಂತ್ರಿ ಹಾಗೂ ನಮ್ಮ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮೋಹನ್‌ ಕುಮಾರ್‌ ಕೊಂಡಜ್ಜಿ, ಪಿ.ಆರ್‌.ರಮೇಶ್‌, ಸಿ.ಎಂ. ಲಿಂಗಪ್ಪ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾಗಿವೆ. ಆ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬ ಒತ್ತಾಯ ಆ ಸಮುದಾಯದ ನಾಯಕರಿಂದ ಕೇಳಿಬರುತ್ತಿದೆ. ಈ ಮಧ್ಯೆ ಸುಧಾಮ ದಾಸ್‌, ಉಮಾಶ್ರೀ, ಸೀತಾರಾಂ ಅವರ ಹೆಸರನ್ನು ಸರ್ಕಾರ ಅಂತಿಮಗೊಳಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next