ಹನೂರು (ಚಾ.ನಗರ): ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಗೆ ನೀಡುವ ದಾಸೋಹದಲ್ಲಿ ಸ್ವತ್ಛತೆ ಕಾಯ್ದುಕೊಳ್ಳುವುದರ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ದಿನನಿತ್ಯ ಪೂಜೆಗೆ ಆಗಮಿಸುವ ಭಕ್ತಾದಿಗಳಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಮಹೋತ್ಸವ ಮತ್ತು ವಿಶೇಷ ದಿನಗಳಲ್ಲಿ ನಿರಂತರ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೆ ಭಕ್ತಾದಿಗಳಿಗೆ ಲಾಡು ಪ್ರಸಾದವನ್ನೂ ವಿತರಿಸಲಾಗುತ್ತಿದ್ದು, ಅಡುಗೆ ಮತ್ತು ಲಾಡು ತಯಾರಿಕೆಯಲ್ಲಿ ಸುರಕ್ಷತೆ ಮತ್ತು ಶುಚಿತ್ವಕ್ಕೆ ನಿರೀಕ್ಷಿತ ಮಟ್ಟದಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬುದು ಭಕ್ತಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇರುವ ದಾಸೋಹ ಭವನ ಸಾಕಾಗುತ್ತಿಲ್ಲ: ಶ್ರೀ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸು ತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ಆಗಮಿಸುತ್ತಿದ್ದ ಭಕ್ತಾದಿಗಳಿಗಿಂತ ದುಪ್ಪಟ್ಟು ಭಕ್ತಾದಿಗಳು ಪ್ರತಿನಿತ್ಯ ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಗೆ ಆಗಮಿಸುವಂತಹ ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ದಾಸೋಹ ಭವನದಲ್ಲಿ ವ್ಯವಸ್ಥೆಗಳಿಲ್ಲ. ಕಳೆದ ಕೆಲವು ದಿನಗಳವರೆಗೆ ದಾಸೋಹ ಭವನದ ನೆಲ ಅಂತಸ್ತಿನಲ್ಲಿ ಭಕ್ತಾದಿಗಳಿಗೆ ದಾಸೋಹವನ್ನು ವಿತರಿಸಲಾಗುತಿತ್ತು. ಆದರೆ ಇಲ್ಲಿ ನೆಲಕ್ಕೆ ಹಾಕಿದ್ದ ಟೈಲ್ಸ್‌ಗಳು ಮತ್ತು ಊಟ ಮಾಡಲು ಅಳವಡಿಸಿದ್ದ ಟೇಬಲ್ ಮತ್ತು ಚೇರುಗಳು ಸಂಪೂರ್ಣವಾಗಿ ಹಾಳಾಗಿದ್ದವು. ಆದ್ದರಿಂದ ಇದೀಗ ಮೊದಲ ಅಂತಸಿನಲ್ಲಿ ಊಟದ ಹಾಲ್ ತೆರೆಯಲಾಗಿದ್ದು ಒಮ್ಮೆಲೆ 700 ಭಕ್ತಾದಿಗಳು ಕುಳಿತು ಊಟ ಮಾಡ ಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದು ಭಕ್ತಾದಿಗಳಿಗೆ ಸಾಕಾಗದ ಹಿನ್ನೆಲೆ ಭಕ್ತಾದಿಗಳು ದಾಸೋಹದ ಸರದಿ ಸಾಲಿನಲ್ಲಿ ಹೆಚ್ಚು ಹೊತ್ತು ಕಾಯ್ದು ನಿಲ್ಲಬೇಕಾದ ಪರಿಸ್ಥತಿಯಿದೆ. ಈ ನಿಟ್ಟಿನಲ್ಲಿ ದಾಸೋಹ ಭವನದಲ್ಲಿ ಹೆಚ್ಚಿನ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂಬುದು ಭಕ್ತಾದಿಗಳ ಆಗ್ರಹವಾಗಿದೆ.
ಆಹಾರ ಪದಾರ್ಥಗಳ ದಾಸ್ತಾನು ವ್ಯವಸ್ಥೆ ಸಮ ರ್ಪಕವಾಗಿಲ್ಲ: ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳ ದಾಸೋಹಕ್ಕಾಗಿ ಭಕ್ತಾದಿಗಳೇ ಅಕ್ಕಿ, ಬೇಳೆ, ತರ ಕಾರಿಗಳನ್ನು ದಾಸೋಹಕ್ಕೆ ನೀಡುತ್ತಿದ್ದಾರೆ. ಆದರೆ ಭಕ್ತಾದಿಗಳು ನೀಡಿದಂತಹ ಆಹಾರ ಪದಾರ್ಥ ಗಳನ್ನು ವೈಜ್ಞಾನಿಕವಾಗಿ ಸಂಗ್ರಹಣೆ ಮಾಡುತ್ತಿಲ್ಲ. ಭಕ್ತಾದಿಗಳು ನೀಡುವಂತಹ ಅಕ್ಕಿಯನ್ನು ವೈಜ್ಞಾನಿಕ ವಾಗಿ ಸಂಗ್ರಹಣೆ ಮಾಡದಿರುವುದರ ಪರಿಣಾಮ ವಾಗಿ ಕೆಲವೊಮ್ಮೆ ಅಕ್ಕಿಯಲ್ಲಿ ಹುಳುಗಳು ಕಂಡು ಬರುತ್ತಿವೆ. ತರಕಾರಿಯನ್ನು ಸುರಕ್ಷಿತವಾಗಿ ಸ್ವತ್ಛವಾದ ವ್ಯವಸ್ಥೆಯಲ್ಲಿ ದಾಸ್ತಾನು ಮಾಡುತ್ತಿಲ್ಲ. ನೆಲದ ಮೇಲೆ ಎಲ್ಲೆಂದರಲ್ಲಿ ದಾಸ್ತಾನು ಮಾಡುತ್ತಿರುವುದರಿಂದ ಭಕ್ತಾದಿಗಳು ನೀಡುವಂತಹ ತರಕಾರಿ ಗಳು ಅರ್ಧಕ್ಕರ್ಧ ಕೊಳೆತು ಹಾಳಾಗುತ್ತಿವೆ. ಜೊತೆಗೆ ಶುದ್ಧತೆಗೂ ಧಕ್ಕೆಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಲಾಡು ತಯಾರಿಕೆಯಲ್ಲಿ ಸುರಕ್ಷತಾ ಕ್ರಮ ಅನು ಸರಿಸಬೇಕು: ಮಲೆಮಾದಪ್ಪನ ಲಾಡು ಪ್ರಸಾದಕ್ಕೆ ಭಕ್ತಾದಿಗಳಿಗೆ ದೈವದ ಪ್ರಸಾದ ಎಂಬುವ ಭಾವನೆಯೇ ಇದೆ. ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಾದ ಪ್ಪನ ದರ್ಶನ ಪಡೆದ ಭಕ್ತರು ಇಲ್ಲಿನ ಲಾಡು ಪ್ರಸಾದ ವನ್ನು ಖರೀದಿಸಿ ತಮ್ಮ ತಮ್ಮ ಬಂಧು-ಬಳಗ, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ಪ್ರಸಾದ ಎಂದು ವಿತರಿಸುವುದು ವಾಡಿಕೆ. ಇಲ್ಲಿನ ಲಾಡು ಪ್ರಸಾದ ತಯಾರಿಕೆಗೆ ಎಫ್ ಎಸ್‌ಎಸ್‌ಎಐ (ಭಾರತೀಯ ಆಹಾರ ಸುಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ) ದಿಂದಲೂ ಮಾನ್ಯತೆ ದೊರೆತಿದೆ. ಆದರೆ ಇಲ್ಲಿ ತಯಾರಿಸುವ ಲಾಡಿನಲ್ಲಿ ಕೆಲವೊಮ್ಮೆ ಗುಣಮಟ್ಟದ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ.
ಲಾಡು ತಯಾರಿಕೆಯಲ್ಲಿ ಸ್ವಚ್ಛತೆಯನ್ನು ಕಾಯ್ದು ಕೊಂಡಿಲ್ಲ. ಆದರೂ ಎಫ್ಎಸ್‌ಎಸ್‌ಐ ಮಾನ್ಯತೆ ಹೇಗೆ ದೊರೆತಿದೆ ಎಂಬುದು ಪ್ರಶ್ನೆಯಾಗಿದೆ. ಎಫ್ ಎಸ್‌ಎಸ್ ಐ ಪ್ರಾಧಿಕಾರದವರು ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿ ನೈರ್ಮಲ್ಯತೆ ಸ್ವತ್ಛತೆ ಪಾಲನೆಯನ್ನು ಪರಿಶೀಲಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ. ಶ್ರೀ ಕ್ಷೇತ್ರದ ಲಾಡು ತಯಾರಾದ ಒಂದೆರೆಡು ದಿನದಲ್ಲಿಯೇ ಮೇಲ್ಪದರ ಗಟ್ಟಿಯಾಗುತ್ತಿದೆ. 3-4 ದಿನ ಕಳೆದರೆ ಪೂರ್ತಿ ಲಾಡು ಗಟ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಲಾಡು ತಯಾರಿಕೆಯಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಭಕ್ತಾದಿಗಳಿಗೆ ತಾಜಾ ಪ್ರಸಾದ ವಿತರಿಸಬೇಕು ಎಂಬುದು ಭಕ್ತಾದಿಗಳ ಆಗ್ರಹ.
ಲಾಡು ತಯಾರಿಕೆಯಲ್ಲಿ ಸ್ವಚ್ಛತೆ ಕಾಪಾಡಲು ಭಕ್ತರು ಆಗ್ರಹ: ಲಾಡು ತಯಾರಿಕೆಯಲ್ಲಿ ಸ್ವತ್ಛತೆ ನೈರ್ಮಲ್ಯತೆ ಕ್ರಮಗಳನ್ನು ಅನುಸರಿಸುತ್ತಿಲ್ಲ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಲಾಡು ತಯಾರಿಕೆಯ ವೇಳೆ ಅಡುಗೆ ತಯಾರಿಕರು ಮತ್ತು ಲಾಡು ಕಟ್ಟುವವರು ತಲೆಗೆ ಏಪ್ರನ್‌ಗಳನ್ನು ಹಾಕುತ್ತಿಲ್ಲ. ಕೈಗಳಿಗೆ ಗ್ಲೌಸುಗಳನ್ನು ಧರಿಸುತ್ತಿಲ್ಲ. ಬರಿಗೈಯಲ್ಲಿ ಲಾಡು ಕಟ್ಟುವುದರಿಂದ ನೈರ್ಮಲ್ಯತೆ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹದೇಶ್ವರಬೆಟ್ಟದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮಾದರಿಯಲ್ಲಿ ದಾಸೋಹದ ವ್ಯವಸ್ಥೆ ಕೈಗೊಳ್ಳಬೇಕು ಮತ್ತು ಲಾಡು ಪ್ರಸಾದ ತಯಾರಿಕೆಯಲ್ಲಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸಬೇಕು ಎಂಬುವುದು ಭಕ್ತಾದಿಗಳ ಆಗ್ರಹವಾಗಿದೆ.
ಶ್ರೀ ಕ್ಷೇತ್ರದಲ್ಲಿ ವಿತರಿಸುವ ದಾಸೋಹದಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಯ ಕೊರತೆಯಿದೆ. ಕೆಲವು ಬಾರಿ ಪೂರ್ತಿ ಬೆಂದು ಹೋಗಿರುವಂತಹ ಅನ್ನವನ್ನು ವಿತರಿಸಲಾಗುತ್ತದೆ. ದಾಸೋಹದಲ್ಲಿ ಪಡಿತರ ಕಾರ್ಡುಗಳಿಗೆ ನೀಡುವಂತಹ ಅಕ್ಕಿಯ ಬದಲಾಗಿ ಉತ್ತಮ ಗುಣಮಟ್ಟದ ಅಕ್ಕಿಯನ್ನೇ ಬಳಕೆ ಮಾಡಲು ಕ್ರಮವಹಿಸಬೇಕು. ಲಾಡು ತಯಾರಿಕೆಯಲ್ಲಿ ಎಫ್ ಎಸ್ ಎಸ್ ಐ ಹೇಳುವ ಮಾನದಂಡದ ಅನ್ವಯ ಸ್ವಚ್ಛತೆ ಕಾಯ್ದುಕೊಳ್ಳಬೇಕು.
●ಚೇತನ್ ಕುಮಾರ್, ಬಂಡಳ್ಳಿ ನಿವಾಸಿ
-ವಿನೋದ್ ಎನ್, ಗೌಡ