ಅಫಜಲಪುರ: ತಾಲೂಕಿನಲ್ಲಿ ಕುರುಬ ಸಮಾಜವು ಪ್ರತಿಶತ ಶೇ 80ರಷ್ಟು ಕಾಂಗ್ರೆಸ್ ಬೆಂಬಲಿತ ಮತದಾರರಿದ್ದಾರೆ. ಅದರೂ ಕಾಂಗ್ರೆಸ್ ಪಕ್ಷದಲ್ಲಿ ಕುರುಬ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷರನ್ನಾಗಿ ಸಮಾಜ ಮುಖಂಡ ರಮೇಶ ಪೂಜಾರಿ ಉಡಚಣ ಅವರನ್ನು ನೇಮಕ ಮಾಡಬೇಕು ಎಂದು ಸಮಾಜ ಅಧ್ಯಕ್ಷ ವಿಠಲ ಜಗಲಗೊಂಡ ಅವರು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ಕುರುಬ ಸಮಾಜದ ಅಧ್ಯಕ್ಷ ವಿಠಲ್ ಜಗಲಗೊಂಡ ಅವರ ಅಧ್ಯಕ್ಷತೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇತಿಹಾದಲ್ಲಿ ತಾಲೂಕಿನಲ್ಲಿ ಕುರುಬ ಸಮಾಜವನ್ನು ರಾಜಕೀಯವಾಗಿ ಬಳಸಿಕೊಂಡು ಇಲ್ಲಿಯವರೆಗೂ ಯಾವುದೇ ರಾಜಕೀಯ
ಸ್ಥಾನಮಾನ ನೀಡದೇ ಇರುವುದು ಸಮಾಜ ಮುಖಂಡರಲ್ಲಿ ಬೇಸರ ತಂದಿದೆ. ಜಿಲ್ಲೆಯಲ್ಲಿ ಒಟ್ಟು 3.15 ಲಕ್ಷ ಹಾಗೂ ತಾಲೂಕಿನಲ್ಲಿ 32 ಸಾವಿರ ಕುರುಬ ಸಮಾಜ ಮತದಾರರಿದ್ದಾರೆ. ಚುನಾವಣೆ ಸಮಯದಲ್ಲಿ ಕುರುಬ ಸಮಾಜ ಯಾರನ್ನು ಬೆಂಬಲಿಸುತ್ತಾರೆಯೋ ಅವರು ಆಯ್ಕೆಯಾಗುತ್ತಾರೆ.
ಇದೆಲ್ಲಾ ರಾಜಕೀಯ ಮುಖಂಡರಿಗೆ ಗೊತ್ತಿದ್ದರೂ ಕೂಡಾ ಸಮಾಜದವರಿಗೆ ಸ್ಥಾನ ಮಾನ ನೀಡುತ್ತಿಲ್ಲ ಎಂದ ಅವರು, ಸಮಾಜದ ಮುಖಂಡ ರಮೇಶ ಪೂಜಾರಿ ಅವರು ಸುಮಾರು ವರ್ಷಗಳಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಬಲವರ್ಧನೆ ಶ್ರಮಿಸಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಜಿಲ್ಲಾ, ತಾಲೂಕು ಮುಖಂಡರು ಈ ಕುರಿತಾಗಿ ಗಂಭೀರವಾಗಿ ಪರಿಗಣಿಸಿ ರಮೇಶ ಪೂಜಾರಿ ಅವರಿಗೆ ಅಫಜಲಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡ ರಮೇಶ ನೀಲಗಾರ ಮಾತನಾಡಿ, ತಾಲೂಕಿನಲ್ಲಿ ಕುರುಬ ಸಮಾಜದವರು ಹೆಚ್ಚಿನ ಮತದಾರರಿದ್ದು, ಇಲ್ಲಿಯವರೆಗೂ ಯಾವುದೇ ರಾಜಕೀಯವಾಗಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಕಾಂಗ್ರೆಸ್ ಆಯ್ಕೆಯಾಗಿರುವ ತಾಲೂಕಿನ ಶಾಸಕ ಎಂ.ವೈ.ಪಾಟೀಲ್ ಅವರು ಕುರುಬ ಸಮಾಜದ ಮುಖಂಡ ರಮೇಶ ಪೂಜಾರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದಂತೆ ಆಗುತ್ತದೆ ಎಂದರು.
ಸಮಾಜ ಸೇವಕ ಜೆ.ಎಂ.ಕೊರಬು ಮಾತನಾಡಿ, ರಾಜ್ಯದಲ್ಲಿ ಕುರುಬ ಸಮಾಜದವರು ನಿಷ್ಠೆಗೆ ಹೆಸರಾದವರು. ಈ ಹಿಂದಿನಿಂದಲೂ ರಾಜಕೀಯ ಸ್ಥಾನಮಾನಗಳು ನೀರಿಕ್ಷೆ ಮಾಡದೆ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಅಷ್ಟಿದ್ದರೂ ಕೂಡಾ ತಾಲೂಕಿನಲ್ಲಿ ಕುರುಬ ಸಮಾಜಕ್ಕೆ ರಾಜಕೀಯವಾಗಿ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಸಮಾಜ ಮುಖಂಡರು ಸಹಿಸುವುದಿಲ್ಲ. ಹೀಗಾಗಿ ಸಮಾಜದ ಮುಖಂಡ ರಮೇಶ ಪೂಜಾರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿ ಕುರುಬ ಸಮಾಜಕ್ಕೆ ರಾಜಕೀಯ ನ್ಯಾಯ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿಕೊಂಡರು.
ರಮೇಶ ಪೂಜಾರಿ ಉಡಚಣ, ಭೀರಣ್ಣ ಕನಕ ಟೇಲರ್, ಲಕ್ಷ್ಮೀಪುತ್ರ ಜಮಾದಾರ, ಭೀಮಣ್ಣ ಪೂಜಾರಿ ಬಳೂರ್ಗಿ, ಸಿದ್ರಾಮಪ್ಪ ಹಿರೇಕುರುಬರ, ಯಲ್ಲಾಲಿಂಗ ಪೂಜಾರಿ, ಮಹಾದೇವಪ್ಪ ಪ್ಯಾಟಿ, ಗುರು ಪೂಜಾರಿ, ಸಿದ್ದು ಪೂಜಾರಿ, ಮಾಳಪ್ಪ ಪೂಜಾರಿ ಮದರಾ.ಬಿ, ಅರ್ಜುನ ಕೇರೂರ, ಮಲ್ಲಿಕಾರ್ಜುನ ಪೂಜಾರಿ, ಫಕೀರಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು.