ಹುಬ್ಬಳ್ಳಿ: ಇಲ್ಲಿನ ವಾರ್ಡ್ ಸಂಖ್ಯೆ 68ರ ಘಂಟಿಕೇರಿ ಓಣಿ ಮಂಗಳವಾರ ಪೇಟೆಯ ಮುಖ್ಯರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಚೇರಿ ಆರಂಭಿಸಲಾಗಿದೆ. ಕಚೇರಿ ಹಾಗೂ ಉಚಿತ ಆನ್‌ಲೈನ್ ಸೇವಾ ಕೇಂದ್ರವನ್ನು ಶಾಸಕ ಪ್ರಸಾದ ಅಬ್ಬಯ್ಯ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರಿ ಸೇವೆ ಹಾಗೂ ಸೌಲಭ್ಯಗಳನ್ನು ಜನರು ಪಡೆಯಲು ಹಾಗೂ ಅವರ ನೋವುಗಳಿಗೆ ಸ್ಪಂದಿಸುವ ಜನೋಪಯೋಗಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಜನಸಂಪರ್ಕ ಕಚೇರಿಗೆ ನೈಜ ಅರ್ಥ ಬರಲಿದೆ ಎಂದರು. ಜನರು ನಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಜನರು ಎರಡು ಬಾರಿ ನನಗೆ ಆಶೀರ್ವಾದ ಮಾಡಿದ್ದು, ಅವರ ನಿರೀಕ್ಷೆ ಹುಸಿಯಾಗದಂತೆ ಕಾರ್ಯನಿರ್ವಹಿಸಿದ್ದೇನೆ.
ಜನಪರ ಕಾರ್ಯಗಳಿಂದ ಜನರ ವಿಶ್ವಾಸ ಗೆಲ್ಲಲು ಸಾಧ್ಯವಾಗಲಿದೆ. ಜನಸಂಪರ್ಕ ಕಚೇರಿ ಉತ್ತಮ ಸ್ಪಂದನೆ ಮೂಲಕ ಮಾದರಿಯಾಗಲಿ ಎಂದರು. ಕ್ಷೇತ್ರ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ ಹೆಮ್ಮೆ ಇದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 18.35 ಕೋಟಿ ರೂ. ವೆಚ್ಚದಲ್ಲಿ ಜನತಾ ಬಜಾರ ಹೈಟೆಕ್ ಮಾರುಕಟ್ಟೆ ಸಂಕೀರ್ಣ, 14 ಕೋಟಿ ರೂ. ವೆಚ್ಚದಲ್ಲಿ ಹಳೇ ಹುಬ್ಬಳ್ಳಿ ಮಾರುಕಟ್ಟೆ ಸಂಕೀರ್ಣ, 5.38 ಕೋಟಿ ರೂ. ವೆಚ್ಚದಲ್ಲಿ ಗಣೇಶಪೇಟೆಯಲ್ಲಿ ಗೋವಾ ಮಾದರಿ ಹೈಟೆಕ್ ಮೀನು ಮಾರುಕಟ್ಟೆ ಕಾಮಗಾರಿ, 3 ಕೋಟಿ ರೂ. ವೆಚ್ಚದಲ್ಲಿ ಬಿಡ್ನಾಳದ ಆರ್. ಕೆ.ಪಾಟೀಲ ಶಾಲೆ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ಸದಾಶಿವ ನಗರ ಶಾಲೆ ಅಭಿವೃದ್ಧಿ ಪಡಿಸಲಾಗುತ್ತಿದೆ.
1.2 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಶಾಲೆಗಳಿಗೆ ಸವಾಲಾಗುವ ರೀತಿಯಲ್ಲಿ ಘಂಟಿಕೇರಿ ಶಾಸಕರ ಸರಕಾರಿ ಮಾದರಿ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಈ ವಾರ್ಡ್‌ನಲ್ಲಿ ಸುಮಾರು 4 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆ, ಸ್ವತ್ಛತೆ ಕಾರ್ಯಗಳನ್ನು ಕೈಗೊಂಡಿದಲ್ಲದೆ, ಇದೀಗ ಜನಸಂಪರ್ಕ ಕಚೇರಿ ಆರಂಭಿಸಿರುವ ನಿರಂಜನ ಹಿರೇಮಠ ಅವರ ಕಾರ್ಯ ಶ್ಲಾಘನೀಯ ಎಂದರು. ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿದರು. ಮುಖಂಡರಾದ ಮೋಹನ ಅಸುಂಡಿ, ಯಮನೂರ ಗುಡಿಹಾಳ, ಮೆಹಮೂದ್, ನಿರಂಜನ ಹಿರೇಮಠ, ಶೇಖಣ್ಣ, ಪ್ರಕಾಶ, ಈಶ್ವರಪ್ಪ, ಬಸಪ್ಪ, ಈಶ್ವರಪ್ಪ, ಕಲ್ಲಪ್ಪ, ಗಂಗಾಧರ, ಎಸ್.ಜಿ. ಹಿರೇಮಠ, ಪ್ರವೀಣ, ಶಿವಾನಂದ, ವಾದಿರಾಜ, ಶರಣು, ಆರ್.ಆರ್. ಕುಲಕರ್ಣಿ, ವಿ.ಎಸ್. ಘಂಟಿಮಠ, ಸುರೇಖಾ, ಪದ್ಮಾ, ಪಲ್ಲವಿ ದುಂಬಾಳೆ ಇದ್ದರು.