Advertisement

ಕನ್ನಡ, ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಕೊಡಿ: ರವಿಕುಮಾರ್‌

08:39 PM Jul 17, 2023 | Team Udayavani |

ಬೆಂಗಳೂರು: ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಹೆಚ್ಚಿನ ಅನುದಾನ ನೀಡುವಂತೆ ಬಿಜೆಪಿಯ ಎನ್‌. ರವಿಕುಮಾರ್‌ ಆಗ್ರಹಿಸಿದ್ದಾರೆ.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಹೊಸ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೇವಲ 237 ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ನಾಡಿನ ಸಾಂಸ್ಕೃತಿಕ ವಲಯ ತೀವ್ರ ಅಸಮಾಧಾನಗೊಂಡಿದೆ. ನಾಡಿನ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ-ಬೆಳೆಸುವ ಮಹತ್ವದ ಪಾತ್ರ ವಹಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ಕಾರ್ಯ ನಿರ್ವಹಿಸಬೇಕಿದೆ. ಸರಕಾರ ನಿಗದಿಪಡಿಸಿರುವ ಅನುದಾನದಲ್ಲಿ ಅರ್ಧದಷ್ಟು ವೇತನ ಹಾಗೂ ಸಾರಿಗೆ ವೆಚ್ಚಕ್ಕೆ ಹೋಗುತ್ತದೆ. ಉಳಿದ ಅನುದಾನದಲ್ಲಿ ಇಲಾಖೆಯ ಕಾರ್ಯನಿರ್ವಹಣೆ ಹಾಗೂ ಪ್ರಮುಖ ಕಾರ್ಯಕ್ರಮಗಳ ಜಾರಿಗೆ ಹಣದ ಕೊರತೆ ಉಂಟಾಗಲಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಸಹಿತ ಕೆಲವು ಪ್ರಾಧಿಕಾರಗಳು. ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಜಾನಪದ, ಶಿಲ್ಪಕಲಾ, ತುಳು, ಲಲಿತಕಲಾ, ಯಕ್ಷಗಾನ, ಅರೆಭಾಷೆ, ಕೊಂಕಣಿ, ಕೊಡವ, ಬ್ಯಾರಿ, ಬಯಲಾಟ, ಲಂಬಾಣಿ ಭಾಷೆ ಸಹಿತ 14 ಅಕಾಡೆಮಿಗಳು, 24 ಪ್ರತಿಷ್ಠಾನಗಳು, 6 ರಂಗಾಯಣಗಳು ಹಾಗೂ 2 ಸಂಶೋಧನ ಕೇಂದ್ರಗಳನ್ನು ಇಲಾಖೆ ಹೊಂದಿದೆ. ಇದಲ್ಲದೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 32 ಜಯಂತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ. 237 ಕೋಟಿ ರೂ. ಮೀಸಲಿಟ್ಟಿದ್ದು, ಅದರಲ್ಲಿ 120-130 ಕೋಟಿ ರೂ. ವೇತನ ಮತ್ತು ಸಾರಿಗೆ ವೆಚ್ಚಕ್ಕೆ ಖರ್ಚಾಗಲಿದೆ.

ಆದ್ದರಿಂದ ರಾಜ್ಯ ಸರಕಾರ ಮೀಸಲಿರಿಸಿದ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಕೊಟ್ಟು, ನಾಡು-ನುಡಿ, ಭಾಷೆ-ಸಾಹಿತ್ಯ ಮತ್ತು ಸಂಪ್ರದಾಯ ರಕ್ಷಣೆಗೆ ಮುಂದಾಗಬೇಕು ಎಂದು ರವಿಕುಮಾರ್‌ ಆಗ್ರಹಿಸಿದರು. ಇದಕ್ಕೆ ಸಂಬಂಧಪಟ್ಟ ಸಚಿವರಿಂದ ವಿವರವಾದ ಉತ್ತರ ಕೊಡಿಸುವುದಾಗಿ ಸಭಾನಾಯಕ ಎನ್‌.ಎಸ್‌. ಬೋಸರಾಜ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next