ದಾವಣಗೆರೆ: ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ತಮ್ಮ ವಾಹನಗಳಿಗೆ ಇಂಧನ ಹಾಕಿಸಲಾಗದೆ ತೊಂದರೆ ಅನುಭವಿಸುತ್ತಿದ್ದು ಎಲ್ಲ ಬ್ಯಾಂಕ್ ಗಳು ಸಾರ್ವಜನಿಕರಿಗೆ ಪೆಟ್ರೋಲ್, ಡಿಸೇಲ್ ಗಾಗಿ ಸಾಲ ನೀಡಬೇಕು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮಂಗಳವಾರ ನಗರದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಈ ರೀತಿ ವಿನೂತನ ಪ್ರತಿಭಟನೆ ನಡೆಸಿ, ಗಮನ ಸೆಳೆದರು. ನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಭೇಟಿ ನೀಡಿದ ಅವರು, ವಾಹನ ಖರೀದಿಸಲು ಸಾಲ ಕೊಡುವ ನೀವು (ಬ್ಯಾಂಕ್‌ಗಳು), ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿಸಲೂ ಸಾಲ ನೀಡಬೇಕು. ಇದಕ್ಕಾಗಿ ಸಾಲ ಕೋರಿಕೆಯ ಅರ್ಜಿ ನಮೂನೆ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಈ ಬಗ್ಗೆ ಕೇಂದ್ರ ಕಚೇರಿ ಹಾಗೂ ರಿಸರ್ವ್ ಬ್ಯಾಂಕ್ ನಿಂದ ನಿರ್ದೇಶನ ಬಂದಿಲ್ಲ. ನಿರ್ದೇಶನ ಬಂದ ಮೇಲೆ ಕೊಡಲಾಗುವುದು ಎಂದು ಹೇಳಿ ಕಳುಹಿಸಿದರು.
ಇದನ್ನೂ ಓದಿ:ಚಿನ್ನ ನಾಪತ್ತೆ ಪ್ರಕರಣದ ಕಿಂಗ್ ಪಿನ್ ಕಿರಣ್ ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಮೈನುದ್ದೀನ್ ಹೆಚ್. ಜೆ., ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಪೆಟ್ರೋಲ್ ಬೆಲೆ 100 ರೂಪಾಯಿ, ಡಿಸೇಲ್ ಬೆಲೆ 80 ರೂಪಾಯಿ ಗಡಿದಾಟಿದೆ. ಹಾಗಾಗಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಈ ಕೂಡಲೇ ಪೆಟ್ರೋಲ್ ಖರೀದಿಗೆ ಡೀಸೆಲ್ ಖರೀದಿಗೆ ಸಾಲದ ಅರ್ಜಿ ನಮೂನೆ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. 40 ಸಾವಿರದಿಂದ 50 ಸಾವಿರ ರೂಪಾಯಿ ದ್ವಿಚಕ್ರ ವಾಹನ ಖರೀದಿಗೆ ಬ್ಯಾಂಕ್‌ಗಳು ಸಾಲ ಒದಗಿಸುತ್ತವೆ. ಆದರೆ, ಅದಕ್ಕೆ ಬೇಕಾಗಿರುವ ಪೆಟ್ರೋಲ್-ಡೀಸೆಲ್‌ಗಾಗಿ ಪ್ರತಿದಿನ ನೂರು ರೂಪಾಯಿಯಂತೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಾಗೂ ವರ್ಷದ 365 ದಿನಕ್ಕೆ 36500ರೂ. ಖರ್ಚು ತಗಲುತ್ತದೆ. ಪ್ರತಿನಿತ್ಯ ನೂರು ಕಿಲೋಮೀಟರ್ ಗಾಡಿ ಓಡಿಸುವ ವ್ಯಕ್ತಿ 200 ರೂ. ಪೆಟ್ರೋಲ್‌ಗಾಗಿ ತೆಗೆದಿಡಬೇಕಾಗಿದೆ. ಆದ್ದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರಾಷ್ಟ್ರೀಯ ಬ್ಯಾಂಕುಗಳಿಂದ ಪೆಟ್ರೋಲ್ ಡೀಸೆಲ್ ಖರೀದಿಗೆ ಸಾಲ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪದಾಽಕಾರಿಗಳಾದ ಮೊಹಮ್ಮದ್ ಸಾದಿಕ್ ಸದ್ದಾಂ, ಮಹಮ್ಮದ್ ವಾಜಿದ್, ಮಹಮ್ಮದ್ ರಫಿಕ್, ರಾಕೇಶ್, ಫಾರೂಕ್ ಶೇಖ್ ಇನ್ನಿತರರು ಈ ಸಂದರ್ಭದಲ್ಲಿದ್ದರು.