ಬೆಂಗಳೂರು: ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಿ ಆರೋಪಿತ ಅಧಿಕಾರಿಗಳ ವಿರುದ್ಧ ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪಪಟ್ಟಿಯನ್ನು ಲೋಕಾಯುಕ್ತಕ್ಕೂ ಸಲ್ಲಿಸ ಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಹೈಕೋರ್ಟ್ ನಿದೇಶನ ನೀಡಿದೆ.
ಭ್ರಷ್ಟಾಚಾರ ನಿಗ್ರಹ ದಳ ರಚಿಸಿದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ ಮಧ್ಯಾಂತರ ಅರ್ಜಿಯನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ನ್ಯಾ| ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ನಡೆಸಿ ಲೋಕಾಯುಕ್ತ ಸಂಸ್ಥೆಯ ಮಧ್ಯಾಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಎಸಿಬಿ ಭ್ರಷ್ಟಾ ಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಗಳಿಗೆ ಸಲ್ಲಿಸುವ ಆರೋಪಪಟ್ಟಿಗಳ ಪ್ರತಿಯನ್ನು ಲೋಕಾಯುಕ್ತಕ್ಕೂ ಸಲ್ಲಿಸಬೇಕು ಎಂದು ನಿರ್ದೇ ಶಿಸಿದೆ. ಅಲ್ಲದೆ, ಲೋಕಾಯುಕ್ತ ಸಂಸ್ಥೆ ಆರೋಪಪಟ್ಟಿ ಆಧರಿಸಿ ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ. ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಎಸಿಬಿ ರಚಿಸಿದ್ದ ಸರಕಾರದ ಕ್ರಮವನ್ನು ಪ್ರಶ್ನಿಸಿ ಚಿದಾನಂದ ಅರಸ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮಧ್ಯಾಂತರ ಅರ್ಜಿ ಸಲ್ಲಿಸಿದ್ದ ಲೋಕಾಯುಕ್ತ ಸಂಸ್ಥೆ, ಭ್ರಷ್ಟಾಚಾರ ಮತ್ತು ದುರಾಡಳಿತ ನಿಯಂತ್ರಿಸಲು ಆಡಳಿತ ಸುಧಾರಣ ಆಯೋಗದ ಶಿಫಾರಸಿನಂತೆ ಲೋಕಾಯುಕ್ತ ಕಾಯ್ದೆ 1984ರಡಿ ಲೋಕಾಯುಕ್ತ ಸಂಸ್ಥೆ ರಚಿಸಲಾಗಿದೆ. ಅದರಂತೆ, ಕಾಯ್ದೆಯ ಸೆಕ್ಷನ್ 7, 9, 12 ಮತ್ತು 14ರ ಅಡಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ನಡೆಸುವ, ಇಲಾಖಾ ವಿಚಾರಣೆ ನಡೆಸುವ ಹಾಗೂ ಶಿಫಾರಸು ಮಾಡುವ ಅಧಿಕಾರವನ್ನು ಲೋಕಾಯುಕ್ತ ಹೊಂದಿದೆ. ಅದರಂತೆ ಎಸಿಬಿ ಸರಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿರುವ ಮತ್ತು ದಾಖಲಿಸಲಿರುವ ಪ್ರಕರಣಗಳ ದೋಷಾರೋಪಪಟ್ಟಿಗಳನ್ನು ಸಲ್ಲಿಸುವಂತೆ ಕೋರಲಾಗಿತ್ತು. ಆದರೆ, ಎಸಿಬಿ ಎಡಿಜಿಪಿ ದೋಷಾರೋಪಪಟ್ಟಿಗಳನ್ನು ಒದಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆರೋಪಪಟ್ಟಿಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲು ಎಸಿಬಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.