Advertisement

ಬಳೆ ಮಾರಿ ಬೈಲಾಟ ಬದುಕಿಸಿದ ಮೇಸ್ಟ್ರೆ

11:31 AM Oct 18, 2018 | |

ವಾಡಿ: ಕಲೆ ಕಲೆಗಾಗಿ ಅಲ್ಲ.. ಕಲೆ ಸಮಾಜಕ್ಕಾಗಿ ಎಂದು ಪ್ರತಿಪಾದಿಸುತ್ತ ಬದುಕುವ ಕಲಾವಿದರು ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಬಲು ವಿರಳ. ಆದರೆ ಇಲ್ಲೊಬ್ಬ ಮೇಸ್ಟ್ರೆ ಬಳೆಗಳನ್ನು ಮಾರಿ ಬದುಕು ಕಟ್ಟುವ ಮೂಲಕ ಜನಮಾನಸದಿಂದ ಕಣ್ಮರೆಯಾಗುತ್ತಿದ್ದ ಜಾನಪದ ಕಲೆಯ ಭಾಗವಾದ ಬೈಲಾಟವನ್ನು ಬದುಕಿಸಿ ಸ್ವತಃ ಎಲೆಮರೆ ಕಾಯಿಯಂತೆ ಬದುಕುತ್ತಿದ್ದಾರೆ.

Advertisement

ಅ.20 ರಂದು ಅಳ್ಳೊಳ್ಳಿ ಗ್ರಾಮದಲ್ಲಿ ವಿಶ್ವಜನ ಸೇವಾ ಸಂಸ್ಥೆ ಹಾಗೂ ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಚಿತ್ತಾಪುರ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಾಡ್ಲಾಪುರ ಗ್ರಾಮದ ಬೈಲಾಟ ಮೇಸ್ಟ್ರೆ ನಿರಂಜನಪ್ಪ
ಮಲಕಂಡಿ ಅವರು ಬಡತನದ ಬದುಕು ಬೆನ್ನಿಗೆ ಕಟ್ಟಿಕೊಂಡು ಹತ್ತನೇ ತರಗತಿ ವರೆಗೆ ಅಕ್ಷರ ಕಲಿತದ್ದಾರೆ. ಅಲ್ಲದೇ ಒಟ್ಟು 75 ದೊಡ್ಡಾಟದ ಕಥೆಗಳನ್ನು ರಂಗದ ಮೇಲೆ ತಂದು ನೂರಾರು ಜನ ರೈತರನ್ನು ಬೈಲಾಟದ ಕಲಾವಿದರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

12 ವರ್ಷದ ಬಾಲಕನಿದ್ದಾಗ ಅಂದರೆ, 42 ವರ್ಷಗಳ ಹಿಂದೆ ಲಾಡ್ಲಾಪುರದಲ್ಲಿ ಏರ್ಪಡಿಸಲಾಗಿದ್ದ ವೀರ ಅಭಿಮನ್ಯು ಎನ್ನುವ ಬೈಲಾಟದಲ್ಲಿ ತಂದೆ ಶರಣಪ್ಪ ಮಲಕಂಡಿ ಅವರ ಅನುಮತಿ ಮೇರೆಗೆ ಗಣಪತಿ ಪಾತ್ರಕ್ಕೆ ಬಣ್ಣ ಹಚ್ಚಿದ ಮೇಸ್ಟ್ರೆ ಮಲಕಂಡಿ ಜನಮೆಚ್ಚುವಂತಹ ಅಭಿನಯ ನೀಡಿ ಗಮನ ಸೆಳೆದಿದ್ದರು. ಅಂದಿನಿಂದ ಬೈಲಾಟದ ಹುಚ್ಚು ಬೆಳೆಸಿಕೊಂಡ ನಿರಂಜನಪ್ಪ, ನಾಟಕಗಳಲ್ಲಿ ಪಾತ್ರಗಳನ್ನು ಬಯಸದೆ ಸ್ವತಃ ನಿರ್ದೇಶನಕ್ಕೆ ಮುಂದಾದರು. ನಾಲವಾರ ವಲಯ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಬೈಲಾಟಗಳ ಬೈಠಕ್‌ ನಡೆಸಿ ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಕುರುಕ್ಷೇತ್ರ ಕಾಳಗ ಅರ್ಥಾತ್‌ ಶ್ರೀಕೃಷ್ಣ ಸಂಧಾನ, ರತಿ ಕಲ್ಯಾಣ, ಶ್ರೀದೇವಿ ಮಹಾತ್ಮೆ, ಮಹಿಷಾಸುರ ಮರ್ಧನಿ, ಸೇತುರಾಜ, ಬಬ್ರುವಾಹನ, ಯುದ್ಧ ವನಕಾಂಡ, ವೀರ ಅಭಿಮನ್ಯು, ಕರ್ಣ ಅರ್ಜುನ ಕಾಳಗ, ಇಂದ್ರಜೀತ ಕಾಳಗ ಹಾಗೂ ದುಶ್ಯಾಸನ ಅರ್ಥಾತ್‌ ಕೀಚಕನ ವಧೆ ಹೀಗೆ ಒಟ್ಟು 75 ಬೈಲಾಟಗಳನ್ನು ಕಲಿಸುವ ಮೂಲಕ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥದಿಂದ ಕಲಾ ಸೇವೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ.

ಗ್ರಾಮದ ಧರ್ಮ ಶಾಲೆಗಳಲ್ಲಿ ನಡೆಯುತ್ತಿದ್ದ ಬೈಲಾಟದ ಬೈಠಕ್‌ಗಳನ್ನು ನೋಡಲು ಹೋಗುತ್ತಿದ್ದ ಬಾಲಕ ನಿರಂಜನಪ್ಪ, ದೊಡ್ಡಾಟದ ಹಲವು ಕಥೆಗಳನ್ನು ಹಳ್ಳಿಗಾಡಿನ ಅನಕ್ಷರಸ್ಥ ರೈತರಿಗೆ ಕಳೆದ 35 ವರ್ಷಗಳಿಂದ ಅಭಿನಯ ಹೇಳಿಕೊಡುವ ಜತೆಗೆ ಕಥಾ ಸಾರಾಂಶವನ್ನು ಹೇಳಿಕೊಟ್ಟು ಬೈಲಾಟದ ಮೇಸ್ಟ್ರು ಆಗಿ ಬೆಳೆದಿದ್ದಾರೆ.

ನಾಟಕ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಅಧಿ ಕಾರಿಗಳ ಕಣ್ಣಿಗೆ ಬೀಳದ ನಿರಂಜನಪ್ಪ ಮಲಕಂಡಿ ಅವರ ಕಲಾ ಸೇವೆಯು ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳ ಕಣ್ಣಿಗೆ ಬಿದ್ದು, ತಾಲೂಕು ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ದಕ್ಕಿಸಿಕೊಂಡಿರುವುದು ಗುಡ್ಡದ ಊರು ಲಾಡ್ಲಾಪುರದ ಜನರಲ್ಲಿ ಹರ್ಷ ಮೂಡಿಸಿದೆ.

Advertisement

„ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next