ಧಾರವಾಡ: ಅರಣ್ಯ ಹಕ್ಕು ಕಾಯ್ದೆ 2005ರಿಂದ ವಂಚಿತರಾದ ಪರಿಶಿಷ್ಟ ಜಾತಿ ಮತ್ತು ಇತರೆ ಜನಾಂಗದ ಅತಿಕ್ರಮಣದಾರರಿಗೆ ಪಟ್ಟಾ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅರಣ್ಯ ಹಕ್ಕು ನಿಯಮದಡಿ ಅತಿಕ್ರಮಣ ಮಾಡಿಕೊಂಡ ಫಲಾನುಭವಿಗಳಿಗೆ ಪಟ್ಟಾ ನೀಡಲು ತಾಲೂಕು ಸಮಿತಿ ರಚನೆ ಮಾಡುವಂತೆ ರಾಜ್ಯ ಸರಕಾರ ಜಿಲ್ಲಾಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು.
ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧಡೆ ಅರಣ್ಯ ಜಮೀನು ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಅಕಾರಿಗಳು ಹಾಗೂ ಕಂದಾಯ ಇಲಾಖೆ ಅಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಧಾರವಾಡ ತಾಲೂಕಿನ ಮಮ್ಮಿಗಟ್ಟಿ ಗ್ರಾಮದ ದಲಿತರು ಮೂರು ತಲೆಮಾರಿನಿಂದ ಗ್ರಾಮದ ಸರ್ವೇ ನಂ.60 ಅ ವ್ಯಾಪ್ತಿಯ 60 ಎಕರೆ ಜಮೀನನ್ನು ಅತಿಕ್ರಮಣವಾಗಿ ಸಾಗುವಳಿ ಮಾಡುತ್ತಿದ್ದಾರೆ.
ಅಲ್ಲದೆ ತಾಲೂಕಿನ ಹೊನ್ನಾಪುರ ಗ್ರಾಮದ ದಲಿತರು ಕಂಬಾರಗಣವಿ ಸರ್ವೇ ನಂ. 84, 131, 146, 147 ವ್ಯಾಪ್ತಿಯ ಸುಮಾರು 82 ಎಕರೆ ಜಮೀನನ್ನು 1978ರ ಪೂರ್ವದಿಂದಲೂ ಉಳಿಮೆ ಮಾಡುತ್ತಿದ್ದಾರೆ.
ಹೀಗಾಗಿ ಆ ದಲಿತ ಕುಟುಂಬಗಳಿಗೆ ಸರಕಾರ ಪಟ್ಟಾ ನೀಡುವಂತೆ ಜಿಲ್ಲಾಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.