ಕಲಬುರಗಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಪ್ರತಿ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿಸಲು ಸರ್ಕಾರ ಅನುಮತಿ ನೀಡಲಾಗಿದೆ. ಈ ಬಗ್ಗೆ ಗ್ರಾಮೀಣ ಪ್ರದೇಶಕ್ಕೆ ನೋಡಲ್ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ರೈತರಿಗೆ ತಿಳಿ ಹೇಳಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಎರಡನೇ ಹಂತದ ತೊಗರಿ ಖರೀದಿ ಸಂಬಂಧ ಕರೆಯಲಾದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಎರಡನೇ ಹಂತದ ತೊಗರಿ ಖರೀದಿಗೆ ರಾಜ್ಯಕ್ಕೆ 10 ಲಕ್ಷ ಕ್ವಿಂಟಲ್ ಮಿತಿಗೊಳಿಸಿದೆ.
ಅದರಂತೆ ರಾಜ್ಯಾದ್ಯಂತ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೆಲವು ಕಡೆ ರೈತರು ಗರಿಷ್ಠ 10 ಕ್ವಿಂಟಲ್ ಮಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಗೆ ಸಹಕಾರ ನೀಡದಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಹಾಗೂ ಕ್ಲಸ್ಟರ್ ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರ ಮಿತಿಗೊಳಿಸಿರುವಂತೆ ತೊಗರಿ ಖರೀದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಿತಿ ಹೆಚ್ಚಳ ಮಾಡಿದ್ದಲ್ಲಿ ಅದರಂತೆ ಕ್ರಮ ವಹಿಸಲಾಗುವುದು ಎಂದು ರೈತರಿಗೆ ಮನವೋಲಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತೊಗರಿ ಖರೀದಿ ಕೇಂದ್ರದ ಬಗ್ಗೆ ಬರುವ ದೂರುಗಳನ್ನು ಕೂಡಲೇ ಇತ್ಯರ್ಥಗೊಳಿಸುವುದಲ್ಲದೇ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಅಲ್ಲದೇ ಎಲ್ಲ ನೋಡಲ್ ಅಧಿಕಾರಿಗಳು 2-3 ದಿನದೊಳಗಾಗಿ ತಾಲೂಕಿನ ಎಲ್ಲ ಖರೀದಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಖರೀದಿ ಕೇಂದ್ರದಲ್ಲಿನ ಆನ್‌ಲೈನ್ ನೋಂದಣಿ, ಚೀಲ ದಾಸ್ತಾನು ಹಾಗೂ ಹಣ ಪಾವತಿ ಬಗ್ಗೆ ಮಾಹಿತಿ ಸಂಗ್ರಹಿಸುವುದಲ್ಲದೇ ವ್ಯವಸ್ಥಿತ ರೀತಿಯಲ್ಲಿ ತೊಗರಿ ಖರೀದಿಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಚಿತ್ತಾಪುರ ತಾಲೂಕು ರಾವೂರನಲ್ಲಿ ಕ್ರಮ ಸಂಖ್ಯೆವಾರು ತೊಗರಿ ಖರೀದಿ ಆಗುತ್ತಿಲ್ಲ ಹಾಗೂ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ ಖರೀದಿ ಕೇಂದ್ರಗಳಲ್ಲಿ ಸರದಿಯಂತೆ ಖರೀದಿಸದಿರುವ ಕುರಿತು ಬಂದಿರುವ ದೂರಿನ ಬಗ್ಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಜೇವರ್ಗಿ ತಾಲೂಕಿನಿಂದ ಹಲವು ದೂರುಗಳು ಬರುತ್ತಿದ್ದು, ಕ್ಲಸ್ಟರ್ ಮತ್ತು ನೋಡಲ್ ಅಧಿಕಾರಿಗಳು ಸಮನ್ವಯತೆ ಸಾಧಿಸಿ ದೂರುಗಳ ಬಗ್ಗೆ ಕ್ರಮ ಕೈಗೊಂಡು ಜಿಲ್ಲಾಡತಕ್ಕೆ ಮಾಹಿತಿ ನೀಡಿ ಎಂದು ಹೇಳಿದರು.
ಎರಡನೇ ಹಂತದ ತೊಗರಿ ಖರೀದಿಗೆ ಈಗಾಗಲೇ 3 ಲಕ್ಷ ತೊಗರಿ ಚೀಲಗಳನ್ನು ಖರೀದಿ ಕೇಂದ್ರಗಳಿಗೆ ರವಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಫೇಡರೇಶನ್ ಶಾಖಾ ವ್ಯವಸ್ಥಾಪಕ ಪ್ರದೀಪ ಸಭೆಗೆ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ರಘುನಂದ ಮೂರ್ತಿ, ಕೃಷಿ ಇಲಾಖೆ ಉಪನಿರ್ದೇಶಕ ಸಮದ್ ಪಟೇಲ್, ಸಹಕಾರ ಸಂಘಗಳ ಉಪನಿಬಂಧಕ ಟಿ. ಫೈರೋಜ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.