Advertisement

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

12:47 AM Dec 17, 2024 | Team Udayavani |

ಬೆಳಗಾವಿ: ಕಿತ್ತೂರು ಕರ್ನಾಟಕಕ್ಕೆ “371ಜೆ’ ಮಾದರಿಯಲ್ಲಿ ಸರಿಸಮಾನ ಸ್ಥಾನ ಮಾನ ನೀಡಬೇಕು, ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗೆ ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸಬೇಕು, ಕಾವೇರಿಯಂತೆ ಕೃಷ್ಣಾ ಮತ್ತಿತರ ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯ ನೀಡುವುದು, ಬಯಲುಸೀಮೆ ಅಭಿವೃದ್ಧಿಗೆ ವಿಶೇಷ ಅನುದಾನ, ಪ್ರತ್ಯೇಕ ರಾಜ್ಯದ ಕೂಗು ಬರದಂತೆ ಆದ್ಯತೆ ಮೇಲೆ ಅಭಿವೃದ್ಧಿ…

Advertisement

ವಿಧಾನಸಭೆಯಲ್ಲಿ ಆರಂಭಗೊಂಡ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಮೂರು ದಿನಗಳ ಚರ್ಚೆಯಲ್ಲಿ ಮೊದಲ ದಿನ ಸೋಮವಾರ ಆಡಳಿತ ಪಕ್ಷ ಸೇರಿ ವಿವಿಧ ಪಕ್ಷಗಳ ಸದಸ್ಯರಿಂದ ಕೇಳಿಬಂದ ಆಗ್ರಹಗಳಿವು.

ಉತ್ತರ ಕರ್ನಾಟಕ ವಿಚಾರದಲ್ಲಿ ಆಗುತ್ತಿ ರುವ ತಾರತಮ್ಯ ಸರಿಪಡಿಸಲು ಕಲ್ಯಾಣ ಕರ್ನಾಟಕಕ್ಕೆ ನೀಡಲಾದ “371 ಜೆ’ಗೆ ಸರಿಸಮಾನ ಸ್ಥಾನಮಾನ ನೀಡಬೇಕು.

ಆ ಮೂಲಕ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಮುಂದಾಗಬೇಕು ಎಂಬ ಕೂಗು ಸ್ವತಃ ಆಡಳಿತ ಪಕ್ಷದ ಸದಸ್ಯರಿಂದ ಕೇಳಿಬಂತು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ನ ಎನ್‌.ಎಚ್‌. ಕೋನರೆಡ್ಡಿ, ಕಲ್ಯಾಣ ಕರ್ನಾಟಕವು “371 ಜೆ’ ಸ್ಥಾನಮಾನ ನೀಡಿದ ಅನಂತರ ಅಭಿವೃದ್ಧಿ ಹೊಂದುತ್ತಿದೆ. ಮತ್ತೂಂದೆಡೆ ದಕ್ಷಿಣ ಕರ್ನಾಟಕ ಈಗಾಗಲೇ ಅಭಿವೃದ್ಧಿ ಹೊಂದಿದೆ. ಆದರೆ ಕಿತ್ತೂರು ಕರ್ನಾಟಕ ಮಾತ್ರ ಹಿಂದುಳಿಯುತ್ತಿದೆ. ಆದ್ದರಿಂದ “371 ಜೆ’ಗೆ ಸರಿಸಮಾನ ಸ್ಥಾನಮಾನ ವನ್ನು ಕಿತ್ತೂರು ಕರ್ನಾಟಕಕ್ಕೂ ನೀಡಬೇಕು. ಇದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಕೇಂದ್ರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಅಧಿವೇಶನ ಬರೀ ಪ್ರತಿಭಟನೆಗೆ ಸೀಮಿತವಾಗುತ್ತಿದೆ. ಆದ್ದರಿಂದ ಕಂದಾಯ, ಗೃಹ ಸೇರಿ ಎರಡು-ಮೂರು ಇಲಾಖೆಗಳ ಕಚೇರಿಗಳನ್ನು ಸುವರ್ಣ ವಿಧಾನ ಸೌಧದಲ್ಲಿ ಆರಂಭಿಸಬೇಕು. ಬಯಲುಸೀಮೆ ಅಭಿವೃದ್ಧಿ ಮಂಡಳಿ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ನೀಡಬೇಕು. ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸಮಿತಿಯು ಶಾಸಕರು ಮತ್ತು ರೈತ ಮುಖಂಡರನ್ನೂ ಒಳಗೊಳ್ಳುವಂತಾಗಬೇಕು ಎಂದು ಅವರು ಆಗ್ರಹಿಸಿದರು.

Advertisement

ಬಿಜೆ ಪಿ ಯ ಮಾನಪ್ಪ ವಜ್ಜಲ್‌, ಕಾಂಗ್ರೆಸಿನ ಶ್ರೀನಿವಾಸ ಮಾನೆ, ಜೆಡಿಎಸ್‌ನ ನೇಮರಾಜ ನಾಯಕ್‌, ಬಿಜೆಪಿಯ ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ ಮತ್ತಿತರರು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಮುಂದಿನ ಅಧಿವೇಶನಕ್ಕೆ ಸ್ವಂತ ಖರ್ಚಿನಲ್ಲಿ ಬರುತ್ತೇನೆ: ಕಂದಕೂರ
ಇಲ್ಲಿ ಚರ್ಚೆಯಾಗುವ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂಬುದು ನನಗೆ ಖಾತ್ರಿ ಆಗಿಬಿಟ್ಟಿದೆ. ಹಾಗಾಗಿ ನಾನು ಮುಂದಿನ ಬಾರಿಯ ಬೆಳಗಾವಿ ಅಧಿವೇಶನಕ್ಕೆ ಸ್ವಂತ ಖರ್ಚಿನಲ್ಲೇ ಬರುತ್ತೇನೆ. ಸರಕಾರದ ಯಾವುದೇ ಭತ್ತೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಜೆಡಿಎಸ್‌ನ ಶರಣಗೌಡ ಕಂದಕೂರ ಬೇಸರ ಹೊರಹಾಕಿದರು.

ನಮ್ಮ-ನಮ್ಮಲ್ಲೇ ಒಗ್ಗಟ್ಟಿಲ್ಲ; ಶಾಸಕ ಸಿದ್ದು ಸವದಿ
ಬಿಜೆಪಿಯ ಸಿದ್ದು ಸವದಿ ಮಾತನಾಡಿ, “ಕಾವೇರಿ ನದಿ ಮತ್ತು ಅದರ ಜಲಾಶಯ ಗಳಿಗೆ ಗಮನಹರಿಸಿದಂತೆ ಉತ್ತರ ಕರ್ನಾಟಕದ ಜಲಾಶಯಗಳಿಗೂ ಒತ್ತುಕೊಡ ಬೇಕು. ನಮ್ಮ-ನಮ್ಮಲ್ಲೇ ಒಗ್ಗಟ್ಟು ಇಲ್ಲದ್ದರಿಂದ ಇಂದು ಈ ಸಮಸ್ಯೆ ಎದುರಿಸುತ್ತಿದ್ದೇವೆ. ವರ್ಷದಲ್ಲಿ ಎಲ್ಲ ಐದು ಗ್ಯಾರಂಟಿ ಜಾರಿ ಗೊಳಿಸಲಾಯಿತು. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ದಶಕಗಳು ಕಳೆದರೂ ಪೂರ್ಣ ಗೊಳ್ಳುತ್ತಿಲ್ಲ. ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ಕೊಡಬೇಡಿ’ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next