Advertisement

ಕೆಮ್ಮು-ಜ್ವರ-ನೆಗಡಿಯಿಂದ ಬಳಲುವವರ ಮಾಹಿತಿ ನೀಡಿ

01:14 PM Apr 27, 2020 | Suhan S |

ಧಾರವಾಡ: ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆ ಇರುವವರ ಬಗ್ಗೆ ಮಾಹಿತಿ ಕ್ರೋಢೀಕರಣಕ್ಕೆ ಗೂಗಲ್‌ ಸ್ಪ್ರೆಡ್‌ ಷೀಟ್‌ ಹಾಗೂ ಮೊಬೈಲ್‌ ಅಪ್ಲಿಕೇಶನ್‌ ಎರಡೂ ಸೌಲಭ್ಯಗಳಿವೆ. ಇದೀಗ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಆ್ಯಪ್‌ ಸರಳವಾಗಿದ್ದು, ಪ್ರತಿಯೊಂದು ಖಾಸಗಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಿಗೆ ಲಾಗಿನ್‌ ಐಡಿ ನೀಡಲಾಗುತ್ತದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತೀವ್ರ ಉಸಿರಾಟದ ತೊಂದರೆ ಹಾಗೂ ಕೆಮ್ಮು, ಜ್ವರ, ನೆಗಡಿ ಮಾದರಿಯ ಲಕ್ಷಣಗಳಿದ್ದರೆ ಅಂತಹ ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಯಾವ ವೈದ್ಯರ ಸಲಹೆ ಅಥವಾ ಟೆಲಿಮೆಡಿಸಿನ್‌ ಆಧರಿಸಿ ಮಾಹಿತಿಗಳನ್ನು ಕೂಡ ಒದಗಿಸಬೇಕು ಎಂದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು ಒಂದು ಸಾವಿರ, ಉಳಿದ ತಾಲೂಕುಗಳಲ್ಲಿ ಸುಮಾರು ಎರಡು ನೂರು ಔಷಧ ಅಂಗಡಿಗಳಿವೆ. ಕೆಪಿಎಂಇ ನೋಂದಾಯಿತ ಸುಮಾರು 1,500 ವೈದ್ಯರು ಆಸ್ಪತ್ರೆಗಳನ್ನು ನಡೆಸುತ್ತಿದ್ದು, ಅವರೆಲ್ಲರೂ ಕಡ್ಡಾಯವಾಗಿ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಪ್ರತಿದಿನ ಅಪ್‌ಡೇಟ್‌ ಮಾಡಬೇಕು. ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಈ ಮಾಹಿತಿಯನ್ನು ಸಂಸ್ಕರಿಸಿ ಕಳುಹಿಸುವ ಕಾರ್ಯ ಮಾಡುವರು. ದೇಶಾದ್ಯಂತ ಈ ಕಾರ್ಯ ನಡೆಯಲಿರುವುದರಿಂದ ಕೊರೊನಾ ನಿಯಂತ್ರಣಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತದೆ ಎಂದರು.

ಕೋವಿಡ್‌-19 ತಪಾಸಣೆಗೆ ಒಳಪಡಿಸುವ ಜನರ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಮಾಡಿ,  ಕೋವಿಡ್ 19 ನಿಯಂತ್ರಿಸಲು ಖಾಸಗಿ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳಿಂದ ಲಭ್ಯವಾಗುವ ಪ್ರಾಥಮಿಕ ಮಾಹಿತಿ ಅತ್ಯಗತ್ಯವಾಗಿದೆ. ಜಿಲ್ಲೆಯ ಎಲ್ಲಾ ಕೆಮಿಸ್ಟ್‌ ಹಾಗೂ ಡ್ರಗ್ಗಿಸ್ಟ್‌ಗಳು ಹಾಗೂ ಕೆಪಿಎಂಇ ನೋಂದಾಯಿತ ವೈದ್ಯರು ಸಹಕಾರ ನೀಡಬೇಕು. ಪ್ರತಿದಿನ ನಿಗದಿತ ನಮೂನೆಯಲ್ಲಿ ಕೆಮ್ಮು, ಜ್ವರ, ನೆಗಡಿ, ಉಸಿರಾಟದ ತೊಂದರೆ ಇರುವವರ ಬಗ್ಗೆ ಮಾಹಿತಿ ಒದಗಿಸಬೇಕು ಎಂದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಅರ್ಹರು ಮಾತ್ರ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳನ್ನು ನಿರ್ವಹಿಸಬೇಕು. ಜಿಲ್ಲೆಯ ಫಾರ್ಮಸಿ ಕಾಲೇಜುಗಳ ಪ್ರಾಚಾರ್ಯರು ತಮ್ಮ ಉಪನ್ಯಾಸಕರ ತಂಡಗಳೊಂದಿಗೆ ಈ ಪರಿಶೀಲನೆ ಕಾರ್ಯದಲ್ಲಿ ಭಾಗಿಯಾಗಬೇಕು. ರೈಲ್ವೆ ಆಸ್ಪತ್ರೆ, ಎಸ್‌ಡಿಎಂ, ಕಿಮ್ಸ್‌ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿರುವ ಗಂಟಲು ದ್ರವ ಸಂಗ್ರಹ ಕೇಂದ್ರ ಹಾಗೂ ಮೊಬೈಲ್‌ ಫೀವರ್‌ ಕ್ಲಿನಿಕ್‌ ಮತ್ತು ಮೊಬೈಲ್‌ ಸ್ಕ್ಯಾಬ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.  ಐಔಐ ಲಕ್ಷಣಗಳಿರುವವರನ್ನು ತ್ವರಿತವಾಗಿ ಗುರುತಿಸಿ, ಕಳುಹಿಸಬೇಕು ಎಂದರು.

Advertisement

ಹು-ಧಾ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾ ಧಿಕಾರಿ ಮಹ್ಮದ್‌ ಜುಬೇರ್‌, ಡಿಎಚ್‌ಒ ಡಾ| ಯಶವಂತ ಮದೀನಕರ್‌, ಔಷಧ ನಿಯಂತ್ರಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಕೆ.ಎಸ್‌ ಸೇರಿದಂತೆ ಔಷಧ ವ್ಯಾಪಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next