ರಾಯಚೂರು: ಆರೋಗ್ಯ ಇಲಾಖೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಆರೋಗ್ಯ ಕ್ಷೇತ್ರದ ಬಜೆಟ್ ಶೇ.1ರಷ್ಟು ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಒಡ್ಡಿ ಗುರುವಾರ ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
ಗುರುವಾರ ಬೆಳಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಿಂದ ಶುರುವಾದ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಆರೋಗ್ಯ ಇಲಾಖೆ ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆತಂಕದಲ್ಲೇ ಸೇವೆ ನೀಡುವಂತಾಗಿದೆ. ಕೆಲಸಕ್ಕೆ ತಕ್ಕ ವೇತನ ಸಿಗದೆ, ಅತ್ತ ಭದ್ರತೆ ಇಲ್ಲದೆ ಕೆಲಸ ಮಾಡುವ ಸ್ಥಿತಿ ಇದೆ. ಹೀಗಾಗಿ ಸಿಬ್ಬಂದಿ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವಂಥವರು ಕಾಯಂ ನೌಕರರಿಗಿಂತ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ನೌಕರರಿಗೆ ಸೇವಾ ಭದ್ರತೆ ಖಾತರಿ ಪಡಿಸಬೇಕು. ಗುತ್ತಿಗೆ ನೌಕರರು ನಿವೃತ್ತಿಯಾಗುವವರೆಗೆ ಸೇವಾ ಭದ್ರತೆ ಕಲ್ಪಿಸಬೇಕು. ವೇತನ ಮತ್ತು ಭತ್ಯೆಗಳು, ವೇತನ ಶ್ರೇಣಿ ನೀಡಲು ಹರಿಯಾಣ ರಾಜ್ಯದ ಮಾದರಿ ಅನುಸರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ ಪ್ರಕಾರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ ಜಾರಿಗೊಳಿಸಿ ಭದ್ರತೆ ಕಲ್ಪಿಸಬೇಕು. ಕಾನೂನು ತೊಡಕುಗಳು ಇಲ್ಲದಂತೆ ಸಂಸತ್ತಿನಲ್ಲಿ ನಿರ್ಣಯ ಕೈಗೊಂಡು ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೊರಗುತ್ತಿಯಲ್ಲಿರುವ ಎಲ್ಲ ನೌಕರರಿಗೆ ಗುತ್ತಿಗೆದಾರರ ಹಾಗೂ ಮಧ್ಯವರ್ತಿಗಳಿಲ್ಲದೇ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿಸಬೇಕು. ಒಳಗುತ್ತಿಗೆ ಆಧಾರದಡಿ ಕೆಲಸ ಮಾಡುವ ನೌಕರರಿಗೆ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನಿ ವೈದ್ಯಕೀಯ ಯೋಜನೆಯನ್ನು ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ಅನ್ವಯಿಸಬೇಕು.
ಗುತ್ತಿಗೆ ನೌಕರರಿಗೆ ಸರ್ಕಾರಿ ನೇಮಕಾತಿಯಲ್ಲಿ ವಯಸ್ಸಿನ ಮಿತಿ ಹೆಚ್ಚಿಸಬೇಕು. ಸೇವಾನುಭವಕ್ಕೆ ತಕ್ಕಂತೆ ಸೇವಾಂಕ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ವೇದಿಕೆ ಸದಸ್ಯರಾದ ವೆಂಕೋಬ ಸರ್ಜಾಪುರ, ಮಂಜುನಾಥ ಸ್ವಾಮಿ, ಪ್ರವೀಣಕುಮಾರ ಹಿರೇಮಠ, ಗುರುಪ್ರಸಾದ ಹಿರೇಮಠ, ಸಂಧ್ಯಾ, ಡಾ| ಜೀವನೇಶ ಹಿರೇಮಠ, ಮಹಾಂತೇಶ ಬ್ಯಾಳಿ, ಡಾ| ನಾಗರಾಜ, ರವಿ ಶುಕ್ಲಾ, ಕೃಷ್ಣವೇಣಿ, ನಬಿಸಾಬ್, ನಾಗರಾಜ ವರ್ಮಾ ಸೇರಿ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.