ಕಲಬುರಗಿ: ದೇಶದ ಜನರು ಘನತೆಯಿಂದ ಜೀವನ ನಡೆಸಲು ಯುವಕರ ಕೈಗಳಿಗೆ ಉದ್ಯೋಗ ನೀಡುವುದರೊಂದಿಗೆ ‘ರೈಟ್ ಟು ವರ್ಕ್’ ಜಾರಿಗೆ ತರುವ ಮೂಲಕ ಉದ್ಯೋಗ ಮಾಡುವ ಹಕ್ಕು ಖಾತರಿ ಒದಗಿಸಬೇಕೆಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಹೇಳಿದರು.
ನಗರದಲ್ಲಿ ಉದ್ಯೋಗಕ್ಕಾಗಿ ಯುವ ಜನರು ವೇದಿಕೆ ವತಿಯಿಂದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉದ್ಯೋಗದ ಲೆಕ್ಕ ಕೊಡಿ ಮತ್ತು ಕಾನೂನು ತಿದ್ದುಪಡಿ ಮೂಲಕ (ಫಿಕ್ಸೆಡ್‌ಟರ್ಮ್ಎಂಪ್ಲಾಯಿಮೆಂಟ್) ಉದ್ಯೋಗ ಭದ್ರತೆ ಕಿತ್ತು ಹಾಕಿದ್ದು ಯಾಕೆ ಎನ್ನುವ ಪ್ರಶ್ನೆ ಕೇಳುವ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾಥಾವನ್ನು ಕಲಬುರಗಿಯ ಎಲ್ಲ ಪ್ರಜ್ಞಾವಂತ ನಾಗರೀಕರು ಬೆಂಬಲಿಸಬೇಕು. ರಾಜ್ಯಾದ್ಯಾಂತ ಈ ಹೋರಾಟ ಪಸರಿಸಲಿ ಮತ್ತು ಸರ್ಕಾರಗಳಿಗೆ ಎಚ್ಚರಿಕೆಯನ್ನು ನೀಡಲಿ ಎಂದರು.
ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿ ಮರೆತಿವೆ. ಚುನಾವಣೆಗೂ ಮುನ್ನ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಬೇಕು. ನಾವು ಕೇವಲ ಉದ್ಯೋಗ ಕೇಳುತ್ತಿಲ್ಲ. ದೇಶ ನಿರ್ಮಾಣದಲ್ಲಿ ಯುವಜನರ ಭಾಗಿದಾರಿಕೆ ಕೇಳುತ್ತಿದ್ದೇವೆ ಎಂದರು.
ಜಾಥಾದಲ್ಲಿ ವೇದಿಕೆ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜ್ವಾಳ, ಶಿವಲಿಂಗಪ್ಪ ಕಿನ್ನೂರ, ಡಿಎಸ್‌ಎಫ್‌ನ ಗುರುರಾಜ ಭಂಡಾರಿ, ಕೆವಿಎಸ್‌ನ ಲಕ್ಷ್ಮಣ ಮಂಡಲಗೇರ, ವಕೀಲ ಸಂತೋಷ ಗುಡೂರು. ಕಾಶಿನಾಥ ಡಾಂಗೆ, ಎಸ್.ಜಿ. ಭಾರತಿ ಹಾಗೂ ಆರೋಗ್ಯ ಇಲಾಖೆ, ಎಪಿಎಂಸಿ ಇಲಾಖೆಗಳ ಗುತ್ತಿಗೆ ನೌಕರರು, ವಿದ್ಯಾರ್ಥಿಗಳು ಹಾಜರಿದ್ದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ಜಾಥಾ ನಡೆಸಲಾಯಿತು. ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಜಾಥಾ ನಡೆಯುತ್ತಿದ್ದು, ಜ.27ರಂದು ಬೆಂಗಳೂರಿನಲ್ಲಿ ಅಂತ್ಯಗೊಳ್ಳಲಿದೆ.