ಹಾಸನ: ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ನಿಖರವಾಗಿ ಪತ್ತೆ ಮಾಡಿ ಕೋವಿಡ್ ಹರಡದಂತೆ ಹೆಚ್ಚಿನ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಸ್ಪತ್ರೆಗಳ ವೈದ್ಯಕೀಯ ತಾಜ್ಯ ವಿಲೇವಾರಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ವ್ಯಾಪಕ ವಾಗಿ ಹರಡುತ್ತಿದೆ. ಈ ಹಂತದಲ್ಲಿ ಸೋಂಕಿತರ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡುವುದು ಅತ್ಯಗತ್ಯ ಎಂದರು.
ಪ್ರತಿ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ಚಿಕಿತ್ಸೆ ಒದಗಿಸ ಬೇಕು. ಸೋಂಕು ಪತ್ತೆಯಾದವರಿಗೆ ಆಯಾ ತಾಲೂಕು ಕೊರೊನಾ ಚಿಕಿತ್ಸಾ ಕೇಂದ್ರಗಳಲ್ಲಿಯೇ ಇರಿಸಿ ಮಧುಮೇಹ, ರಕ್ತದೊತ್ತಡ, ಇಸಿಜಿ ಮತ್ತಿತರ ವೈದ್ಯಕೀಯ ತಪಾಸಣೆ ನಡೆಸಬೇಕು. ಅಲ್ಲಿಯೇ ಚಿಕಿತ್ಸೆ ನೀಡಿ ಒಳ್ಳೆಯ ಊಟೋಪಚಾರ ಮತ್ತು ಮೂಲ ಸೌಕರ್ಯ ಒದಗಿಸಬೇಕು. ಹೆಚ್ಚಿನ ನಿಗಾವಹಿಸಬೇಕಾದವರನ್ನು ಮಾತ್ರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳಹಿಸಬೇಕು ಎಂದರು.
ಕೇವಲ ಸೋಂಕಿತರ ನಿವಾಸಗಳನ್ನು ಮಾತ್ರ ಸೀಲ್ ಡೌನ್ ಮಾಡದೇ ಅಕ್ಕಪಕ್ಕದ ಮನೆಗಳನ್ನು ಒಳಗೊಂಡ ಪ್ರದೇಶವನ್ನು ಈ ವ್ಯಾಪ್ತಿಗೆ ತರಬೇಕು ಇದರಿಂದ ಸೋಂಕು ಹರಡುವುದನನ್ನು ನಿಯಂತ್ರಿಸಲು ಸಾಧ್ಯ ಎಂದರು. ಆಸ್ಪತ್ರೆಗಳಿಂದ ಬಿಡುಗಡೆಯಾದ ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ 6 ತಂಡಗಳನ್ನು ರಚಿಸಿ ಅವರ ನೆರವು ಪಡೆದು ಪ್ರಾಥಮಿಕ ಸಂಪರ್ಕಿತರ ಗುರುತಿಸುವಿಕೆ, ಗಣಕೀ ಕರಣ ಮತ್ತಿತರ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಪಂ ಸಿಇಒ ಬಿ.ಎ.ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಕಾಂತರಾಜು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.