ಕೋಲಾರ: ಬೆಂಗಳೂರಿಗೆ ಕೂಗಳತೆ ದೂರದಲ್ಲಿ ರುವ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಜತೆಗೆ ಸ್ಥಳೀಯ ಶಾಸಕರನ್ನು ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಬೇಕೆಂದು ಮುಖ್ಯ ಮಂತ್ರಿಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.
ತಾಲೂಕಿನ ಮಂಗಸಂದ್ರ ಪ್ರಗತಿಪರ ರೈತ ವೆಂಕಟೇಶಪ್ಪನವರ ತೋಟದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿ, ಹತ್ತಾರು ವರ್ಷಗಳಿಂದ ಜಿಲ್ಲೆಯ ಸ್ಥಳೀಯರಿಗೆ ಉಸ್ತುವಾರಿ ಸಿಕ್ಕಿಲ್ಲ. ದೇಶಕ್ಕೆ ಹಾಲು ಹಣ್ಣು, ತರಕಾರಿ ನೀಡುವ ಸ್ವಾಭಿಮಾನಿ ರೈತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಕೃಷಿ ಆಧಾರಿತ ಕೈಗಾರಿಕೆಗಳು ಮಾವು ಸಂಸ್ಕರಣಾ ಘಟಕಗಳಿಗೆ ಆದ್ಯತೆ ಸೇರಿದಂತೆ ರೈತರ ಸಮಸ್ಯೆಗಳಿಗೆ ನೂತನ ಸರ್ಕಾರ ಸ್ಪಂದಿಸಲಿದೆ ಎನ್ನುವ ನೀರಿಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ ಎಂದರು. ಮಹಿಳಾ ರೈತ ಸಂಘದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, 6 ಜನ ಶಾಸಕರ ಮೇಲೆ ಜಿಲ್ಲೆಯ 6 ಕ್ಷೇತ್ರದ ಅಭಿವೃದ್ಧಿ ಎಂಬುದು ಹೆಗಲ ಮೇಲೆ ನಿರೀಕ್ಷೆಗಳ ಮಹಾಪೂರವಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ದಲ್ಲಾಳಿಗಳ ಹಾವಳಿ ನಿಯಂತ್ರಿಸಿ: ನಗರದ ಮಾರುಕಟ್ಟೆಯ ಜಾಗದ ಸಮಸ್ಯೆ, ನಕಲಿ ಔಷಧ , ಬಿತ್ತನೆ ಬೀಜ, ರಸಗೊಬ್ಬರಗಳ ನಿಯಂತ್ರಣ ಜತೆಗೆ ಸರ್ಕಾರಿ ಶಾಲೆ ಆಸ್ಪತ್ರೆ ಅಭಿವೃದ್ಧಿ, ಖಾಸಗಿಗಳ ಶಾಲೆಗಳ ಡೊನೇಷನ್ ಹಾವಳಿ, ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಯಿಂದ ಜನಸಾಮಾನ್ಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಜವಬ್ದಾರಿ ಕೋಲಾರ ಶಾಸಕರ ಮೇಲಿದೆ. ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾವು ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಕಾರ್ಮಿಕರ ರಕ್ಷಣೆ, ಕಮಿಷನ್ ಹಾವಳಿಯಿಂದ ರೈತರ ರಕ್ಷಣೆಗೆ ಆದ್ಯತೆ ನೀಡಬೇಕು. ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆ ರಾಜಕಾಲುವೆಗಳ ಮೇಲೆ ಆಕ್ರಮ ಗಣಿಗಾರಿಕೆ ನಿಷೇಧಿಸುವ ಮೂಲಕ ಜನರ ಆರೋಗ್ಯ ರೈತರ ಬೆಳೆ ರಕ್ಷಣೆ ಮಾಡಬೇಕಾದ ಜವಬ್ದಾರಿ ಇದೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ: ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗಡಿಭಾಗದ ರೈತರ ನಿದ್ದೆಗೆಡಿಸುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು. ಯರ್‌ಗೊಳ್ ಉದ್ಘಾಟನೆಗೆ ಮಾನ್ಯತೆ ನೀಡಿ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿ ಇದೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸರ್ಕಾರಿ ಆಸ್ತಿ ಉಳಿಸುವ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಅದ್ಯತೆ ನೀಡಬೇಕು. ಕೆಜಿಎಫ್ ಶಾಸಕ ರೂಪ ಶಶಿಧರ್ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಬೇಕು. ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಸುವಂತೆ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಶೆ„ಲಜ, ಚೌಡಮ್ಮ, ರತ್ನಮ್ಮ, ವೆಂಕಟಮ್ಮ, ಲಕ್ಷ್ಮಮ್ಮ, ಶಾರದ, ನೇತ್ರ, ವೆಂಕಟೇಶಪ್ಪ, ಮುಂತಾದವರಿದ್ದರು.