Advertisement

ನಿರಂತರ ವಿದ್ಯುತ್‌ ಕೊಡಿ

06:23 AM Jan 19, 2019 | Team Udayavani |

ಮಲೇಬೆನ್ನೂರು: ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 12 ಗಂಟೆ ವಿದ್ಯುತ್‌ ಮತ್ತು ಭದ್ರಾ ಕಾಲುವೆ ಕೊನೆಭಾಗದ ಜಮೀನುಗಳಿಗೆ ನೀರು ತಲುಪಿಸುವಂತೆ ಕ್ರಮಕ್ಕೆ ಒತ್ತಾಯಿಸಿ ಮಲೇಬೆನ್ನೂರು ಬೆಸ್ಕಾಂ ಕಚೇರಿ ಎದುರು ಕೊನೆಭಾಗದ ರೈತರು ಧರಣಿ ನಡೆಸಿದರು.

Advertisement

ರೈತ ಮುಖಂಡ ಕುರುವ ಗಣೇಶ್‌ ಮಾತನಾಡಿ, ಜಲಾಶಯಗಳು ತುಂಬಿದ್ದರೂ ಕೊನೆಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಇಲ್ಲ. ರಾಜಕಾರಣಿಗಳು ರೆಸಾರ್ಟ್‌ ವಾಸ ಮಾಡುತ್ತಿದ್ದು ರೈತರ ಗತಿ ಏನು? 2011-12ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ರೈತರು ಹಣ ತುಂಬಿದ್ದರೂ ಇನ್ನೂ ಸತಾಯಿಸುತ್ತಿದ್ದಾರೆ. ಈ ಪರಿಸ್ಥಿತಿ ಮುಂದುವರಿದರೆ ರೈತರು ಬಾರಕೋಲು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌ ಮಾತನಾಡಿ, ಹೊಳೆ ಮತ್ತು ಹಳ್ಳದ ಪಕ್ಕದಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 12 ತಾಸು ವಿದ್ಯುತ್‌ ನೀಡಬೇಕು. ಮಲೇಬೆನ್ನೂರು, ಸಾಸ್ವೆಹಳ್ಳಿ ಮತ್ತು ಬಸವಾಪಟ್ಟಣ ವಿಭಾಗಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಶಾಸಕರು ಮತ್ತು ಉಸ್ತುವಾರಿ ಸಚಿವರು ಈ ಕೂಡಲೇ ಹುದ್ದೆಗಳನ್ನು ತುಂಬಬೇಕು ಎಂದು ತಾಕೀತು ಮಾಡಿದರು.

ರೈತ ಮುಖಂಡ ಹಾಳೂರು ನಾಗರಾಜ್‌ ಮಾತನಾಡಿ, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ನಮ್ಮೊಂದಿಗೆ ಹೋರಾಟಕ್ಕೆ ಧುಮುಕಬೇಕು ಎಂದು ಆಗ್ರಹಿಸಿದರು.

ನೀರಾವರಿ ಇಂಜಿನಿಯರ್‌ ರವಿಚಂದ್ರ ಮತ್ತು ರಾಜೇಂದ್ರ ಮಾತನಾಡಿ, ಇನ್ನೆರಡು ದಿನಗಳಲ್ಲಿ ಕೋಮಾರನಹಳ್ಳಿ ಬಳಿ 4.4 ಅಡಿ ನೀರು ತಂದುಕೊಡುತ್ತೇನೆ. ನಾನು ವಾರಕ್ಕೆ ಮೂರು ದಿನ ಮಲೇಬೆನ್ನೂರು ಕಚೇರಿಗೆ ಬರುತ್ತೇನೆ. ರೈತರು ಶಾಂತವಾಗಿರಬೇಕು ಎಂದು ವಿನಂತಿಸಿದರು.

Advertisement

ಶಾಸಕ ಎಸ್‌. ರಾಮಪ್ಪನವರು ಸಿಎಲ್‌ಪಿ ಸಭೆಯಲ್ಲಿದ್ದಾರೆ. ಸಭೆ ಮುಗಿದ ತಕ್ಷಣ ವಿದ್ಯುತ್‌ ಸಚಿವರೊಂದಿಗೆ ಮಾತನಾಡಿ ಸತತವಾಗಿ 10 ತಾಸುಗಳವರೆಗೆ ತ್ರಿಫೇಸ್‌ ವಿದ್ಯುತ್‌ ನೀಡುವಂತೆ ಆದೇಶ ಮಾಡಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರ ಅಪ್ತಸಹಾಯಕ ದೂರವಾಣಿಯಲ್ಲಿ ರೈತರಿಗೆ ತಿಳಿಸಿದರು.

ಇನ್ನೆರಡು ದಿನ ಕಾದು ನೋಡಿ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರಾದ ಪಿ. ನಿಜಗುಣ, ಡಿ.ಜಿ. ಷಣ್ಮುಖಯ್ಯ, ಕೆ. ಮಲ್ಲಪ್ಪ, ಡಿ. ರೇವಣಪ್ಪ, ಬಿ.ಎಸ್‌. ಹನುಮಗೌಡ, ಕಾವೇರಿ ಕುಬೇರಗೌಡ, ಚೋಳಪ್ಪರ ಬೀರಪ್ಪ, ಹನುಮಂತಪ್ಪ ಹಿಂಡಸಘಟ್ಟ, ರಾಮಪ್ಪ ಗಡಿಗೇರ, ಪ್ರಸನ್ನಕುಮಾರ್‌, ಹನುಮಗೌಡ ಬಸಟ್ಟೇರ, ಹನುಮಗೌಡ ದಡ್ಡೇರ, ಹರೀಶ್‌ ಕೆ.ಡಿ. ಪರಮೇಶ್‌, ಹುಲ್ಲತ್ತಿ ರುದ್ರಗೌಡ, ಸಿದ್ದನಗೌಡ, ಆಟೋ ಕಲ್ಯಾಣಿ ಬಸವರಾಜ್‌, ಹಾಗೂ ಜಿ. ಬೇವಿನಹಳ್ಳಿ, ನಂದಿಗುಡಿ, ಕೊಕ್ಕನೂರು, ಗೋವಿನಹಾಳು, ವಾಸನ, ಪಾಳ್ಯ, ಹಿಂಡಸಘಟ್ಟ, ಹನಗವಾಡಿ, ಹೊಳೇಸಿರಿಗೆರೆ ಮುಂತಾದ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಮುನ್ನ ರೈತರು ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭಿಸಿದರು. ಹಳೇ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ವೃತ್ತ ನಿರೀಕ್ಷಕ ಗುರುನಾಥ್‌, ಪಿಎಸ್‌ಐ ಮೇಘರಾಜ್‌ ಮತ್ತು ರವಿ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next