Advertisement

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

01:14 AM May 20, 2024 | Team Udayavani |

ಬಂಟ್ವಾಳ: ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದಾಗ ಭಾಷೆಯ ಉಳಿವಿನ ಜತೆಗೆ ಜಾನಪದ ಪರಂಪರೆಯ ಆಚರಣೆಗಳು ಉಳಿಯಲು ಸಾಧ್ಯ. ನಾವು ಮಕ್ಕಳ ಕೈಗೆ ಮೊಬೈಲ್‌ ಕೊಡುವ ಬದಲು ದಿನಪತ್ರಿಕೆ ಕೊಟ್ಟು ಓದುವ ಹವ್ಯಾಸ ಬೆಳೆಸಿದಾಗ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾವಿರಾರು ರೂಪಾಯಿ ವ್ಯಯಿಸಿ ಕೋಚಿಂಗ್‌ ಕೊಡಿಸುವುದು ತಪ್ಪುತ್ತದೆ ಎಂದು ಡಾ| ಜೋಗತಿ ಮಂಜಮ್ಮ ಹೇಳಿದರು.

Advertisement

ಅವರು ರವಿವಾರ ಬಿ.ಸಿ.ರೋಡಿನ ಲಯನ್ಸ್‌ ಸೇವಾ ಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಆಯೋಜಿಸಿದ್ದ ಆಹಾರ ಮೇಳ, ವಸ್ತು ಪ್ರದರ್ಶನ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಮೇಳ ಒಳಗೊಂಡ “ಪತ್ತನಾಜೆ ಜಾನಪದ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ, ಧರ್ಮವನ್ನು ಮೀರಿ ಬದುಕಿದಾಗಲೇ ನಮ್ಮ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ. ಜಾನಪದ ಲೋಕವನ್ನು ಗಟ್ಟಿಗೊಳಿಸಿದ ಕೀರ್ತಿ ಜಾನಪದ ಪರಿಷತ್ತಿನ ಸ್ಥಾಪಕ ನಾಗೇಗೌಡರಿಗೆ ಸಲ್ಲುತ್ತದೆ ಎಂದರು.

ಸ್ವಾಭಿಮಾನದ ಬದುಕು ಕೊಡಿ
ಜೀವನದಲ್ಲಿ ಕಾಲೇಜು ಮೆಟ್ಟಿಲು ಹತ್ತಲು ಸಾಧ್ಯವಾಗದೇ ಇದ್ದರೂ ನಾನು ಕಲಿತ ಜಾನಪದವು ನೂರಾರು ಕಾಲೇಜುಗಳಲ್ಲಿ ಉಪನ್ಯಾಸ ನೀಡುವಂತೆ ಮಾಡಿದೆ. ಎಂಬಿಬಿಎಸ್‌, ಪಿಎಚ್‌ಡಿ ಮಾಡದೇ ಇದ್ದರೂ ಹೆಸರಿನ ಮುಂದೆ ಡಾಕ್ಟರ್‌ ಎಂದು ಬರೆಯುವಂತೆ ಮಾಡಿದೆ. ಅಂದು ಯಾರಿಗೂ ಬೇಡವಾಗಿದ್ದ ನನ್ನ ಜೀವನದ ಸಾಧನೆ ಇಂದು ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿದೆ. ಸಮಾಜದಲ್ಲಿ ನಿಮ್ಮೊಡನೆ ತೃತೀಯ ಲಿಂಗಿಗಳು ಇದ್ದರೆ ಅವರನ್ನು ದೂರ ಮಾಡದೆ ಶಿಕ್ಷಣ ಕೊಡಿಸುವ ಕಾರ್ಯ ಮಾಡಿ, ಆಗ ಅವರು ಕೂಡ ಸ್ವಾಭಿಮಾನದ ಜೀವನ ರೂಪಿಸಿಕೊಳ್ಳುತ್ತಾರೆ. ಇಲ್ಲದೇ ಇದ್ದರೆ ಟೋಲ್‌ಗೇಟ್‌, ಟ್ರಾಫಿಕ್‌ ಸಿಗ್ನಲ್‌, ಇತರ ಕಡೆಗಳಲ್ಲಿ ಭಿಕ್ಷೆ ಬೇಡುವುದೇ ಅವರ ಜೀವನವಾಗುತ್ತದೆ ಎಂದು ಹೇಳಿದರು.

ಭಾವುಕರಾದ ಮಂಜಮ್ಮ
ಹೆಣ್ಣೂ ಅಲ್ಲ-ಗಂಡೂ ಅಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಮನೆಯವರು, ಕುಟುಂಬದವರು, ಸಮಾಜದವರಿಗೆ ಬೇಡ ವಾಗಿದ್ದೆ. ಅವಮಾನದ ಬದುಕು ಬೇಡವೆಂದು ತೀರ್ಮಾನಿಸಿದ್ದೆ. ಆದರೆ ಸ್ವಾಭಿಮಾನದಿಂದ ಬದುಕುವ ಹುಮ್ಮಸ್ಸು ಇಲ್ಲಿಯ ತನಕ ತಂದು ನಿಲ್ಲಿಸಿದೆ. ಹಿಂದೆ ಬಸ್ಸಿನಲ್ಲಿ ಹೋಗಬೇಕಾದರೆ ಯಾರೂ ಹತ್ತಿರ ಕೂರುತ್ತಿರಲಿಲ್ಲ. ಆದರೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಅವರೆಲ್ಲರೂ ಪಡೆಯುವ ಟಿಕೆಟ್‌ನಲ್ಲಿ ನನ್ನ ಭಾವಚಿತ್ರ ಇದ್ದು, ಅಭಿನಂದನೆ ಬರೆಯ ಲಾಗಿತ್ತು ಎಂದು ಹೇಳುತ್ತ ಮಂಜಮ್ಮ ಭಾವುಕರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next