ಕೊಪ್ಪಳ: ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಮುಖ್ಯ ತತ್ವವು ಮಕ್ಕಳು ಕುಟುಂಬದ ವಾತಾವರಣದಲ್ಲಿ ಘನತೆಯೊಂದಿಗೆ ಜೀವಿಸುವುದಾಗಿದೆ ಎಂದು ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್ ಹೇಳಿದರು.
ನಗರದ ಸರಕಾರಿ ಬಾಲಕರ ಬಾಲಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳದವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ-2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಈ ದೇಶದ ಭವಿಷ್ಯ. ಮಕ್ಕಳ ಸಂರಕ್ಷಣೆಗಾಗಿ ಮತ್ತು ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣಕ್ಕಾಗಿ ಸರಕಾರವು ಹಲವಾರು ಯೋಜನೆ ಮತ್ತು ಕಾನೂನುಗಳನ್ನು ಜಾರಿಗೊಳಿಸಿದೆ. ಅದಕ್ಕಾಗಿ ಸರಕಾರವು ಮಕ್ಕಳ ಪಾಲನಾ ಕೇಂದ್ರದ ಮಕ್ಕಳಿಗಾಗಿ ಪ್ರಾಯೋಜಕತ್ವ ಯೋಜನೆ, ಉಪಕಾರ ಯೋಜನೆಯನ್ನು ಜಾರಿಗೊಳಿಸಿದೆ. ಮಕ್ಕಳ ಪಾಲನಾ ಕೇಂದ್ರದಲ್ಲಿ ಇರುವಷ್ಟು ದಿನ ತಾವುಗಳು ಉತ್ತಮವಾಗಿ ವಿದ್ಯಾಭ್ಯಾಸವನ್ನು ಮಾಡಿ, ನಿಮ್ಮ ಉತ್ತಮ ಹವ್ಯಾಸವನ್ನು ಮುಂದುವರಿಸಿ. ಮಕ್ಕಳ ಪಾಲನಾ ಕೇಂದ್ರದ ಮಕ್ಕಳು ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆಯಂತಹ ಇನ್ನೂ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು. ಅದಕ್ಕೆ ಬೇಕಾಗುವ ಯಾವುದೇ ರೀತಿಯ ಸಹಕಾರ, ನೆರವು ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಮಾತನಾಡಿ, ತಮಗೆ ಯಾವುದೇ ರೀತಿಯ ಕಾನೂನು ನೆರವು ಅವಶ್ಯವಿದ್ದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸರಕಾರಿ ಬಾಮಂದಿರಗಳಿಗೆ ನೆರವು ನೀಡಿದ ವೀರೇಶ ಮಹಾಂತಯ್ಯನ ಮಠ, ವಿಶಾಲಾಕ್ಷಿ, ವೀಣಾ, ಬಾಳಮ್ಮ ಮೇಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪದ್ಮಾವತಿ ಜಿ.,ನಿರೂಪಣಾಧಿಕಾರಿಗಳಾದ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ, ಬಾಲಕರ ಬಾಲಮಂದಿರದ ಸಹ ಅಧೀಕ್ಷಕ ಕಮಲಮ್ಮ, ಬಾಲಕಿಯರ ಬಾಲಮಂದಿರದ ಅಧೀಕ್ಷಕ ಭುವನೇಶ್ವರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲಮಂದಿರಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು. ಸಂಗೀತಾ ನಿರೂಪಿಸಿದರು. ರಾಜು ಮೂರ್ಪಡೆ, ಕಿರಣ ವಂದಿಸಿದರು.