ಉಡುಪಿ : ಅಂಗವಿಕಲರಿಗೆ ಸಹಾನುಭೂತಿ ತೋರಿಸದೆ ಅವರಲ್ಲಿನ ಕೌಶಲ, ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಲು ವೇದಿಕೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ತಿಳಿಸಿದರು. ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿ. ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ನೀಡಿದೆ. ಅಂಗವಿಕಲರು ಇತರರಂತೆ ಸಮಾನವಾಗಿ ಜೀವನ ನಡೆಸಲು ವಿಶೇಷ ಸೌಲಭ್ಯ ನೀಡುವಂತೆ ನಿರ್ದೇಶಿಸಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿರುವ ವಿಶೇಷ ಸೌಲಭ್ಯಗಳ ಪ್ರಯೋಜನ ಪಡೆಯಬೇಕು. ಅದಕ್ಕೆ ವಿವಿಧ ಸಂಘಟನೆಗಳು, ಪೋಷಕರು ಪ್ರೋತ್ಸಾಹಿಸಬೇಕು ಎಂದರು.
ಈ ಸಂದರ್ಭ ವಿಶೇಷ ಸಾಧನೆ ಮಾಡಿದ ಅರುಣ ಕುಮಾರಿ (ಕಲಾಕ್ಷೇತ್ರ), ಸೌಜನ್ಯಾ (ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡೆ), ಭುವನಾ (ಕ್ರೀಡೆ), ಮಟ್ಟಿ ಲಕ್ಷ್ಮೀನಾರಾಯಣ ರಾವ್ (ಸಮಾಜ ಸೇವೆ), ನೀಲಾಧರ ಶೆಟ್ಟಿಗಾರ್ (ಕ್ರಿಯಾಶೀಲ ಚಟುವಟಿಕೆ), ಅರುಣೋದಯ ವಿಶೇಷ ಶಾಲೆ (ಉತ್ತಮ ಸಂಸ್ಥೆ) ಇವರನ್ನು ಸಮ್ಮಾನಿಸಲಾಯಿತು.
ಅಂಗವಿಕಲರಿಗೆ 1,000 ಡ್ರೈವಿಂಗ್ ಲೈಸೆನ್ಸ್ ಕೊಡಿಸುವಲ್ಲಿ ಸಹಕರಿಸಿದ ಜಗದೀಶ್ ಭಟ್ ಮತ್ತು ಎಸೆಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಹಾಗೂ ರಾಜ್ಯ, ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಸಮ್ಮಾನಿಸಲಾಯಿತು. ಅಂಗವಿಕಲರಿಗೆ ವೀಲ್‌ಚೇರ್ ವಿತರಣೆ ಮತ್ತು ವಿವಾಹ ಪ್ರೋತ್ಸಾಹಧನ ವಿತರಿಸಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮ, ಅಂಗವಿಕಲರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ರೆಡ್‌ಕ್ರಾಸ್ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಅಂಗವಿಕಲರ ಪೋಷಕರ ಒಕ್ಕೂಟದ ಅಧ್ಯಕ್ಷ ಜೈ ವಿಟ್ಠಲ್, ಅಂಗವಿಕಲರ ಒಕ್ಕೂಟದ ಅಧ್ಯಕ್ಷ ವಿಲ್ಫ್ರೆಡ್ ಗೋಮ್ಸ್, ತಾಲೂಕು ಅಂಗವಿಕಲರ ಒಕ್ಕೂಟದ ಮಂಜುನಾಥ ಹೆಬ್ಟಾರ್ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಪ್ರಸ್ತಾವಿಸಿದರು. ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಶಕ್ತೀಕರಣ ಇಲಾಖೆ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿ, ನಿರೂಪಿಸಿದರು. ವಿಜೇತ ವಿಶೇಷ ಮಕ್ಕಳ ಶಾಲೆಯ ಕಾಂತಿ ಹರೀಶ್ ವಂದಿಸಿದರು.