ಹೂವಿನಹಿಪ್ಪರಗಿ: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಗತಿಸಿದರೂ ರಾಜ್ಯದ ಕೆಲ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಬಸವನಬಾಗೇವಾಡಿ ತಾಲೂಕಿನ ಉತ್ನಾಳ ತಾಂಡಾ (ರಾಮನಗರ) ಗ್ರಾಮಸ್ಥರು ಬಸ್ ಸೌಕರ್ಯವಿಲ್ಲದೆ ನಿತ್ಯ ಪರದಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ನಮಗೆ ಬಸ್ ಸೌಲಭ್ಯ ನೀಡಿ ಪುಣ್ಯಾ ಕಟ್ಟಗೋರಿ ಎಂದು ಆಗ್ರಹಿಸಿದ್ದಾರೆ.
ಹೌದು, ಈ ಗ್ರಾಮ ಈಚೆಗೆ ಕಂದಾಯ ಗ್ರಾಮವಾಗಿ ಮೇಲ್ದರ್ಜೆಗೇರಿದೆ. ಆದರೂ ಸಾರಿಗೆ ಸೌಲಭ್ಯ ವಂಚಿತ ಗ್ರಾಮ. ಸುಮಾರು ಎರಡು ಸಾವಿರ ಜನ ಇಲ್ಲಿ ನೆಲೆಸಿದ್ದಾರೆ. ಇಲ್ಲಿ ದಿನ ಬೆಳಗಾದರೆ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಸಮೀಪದ ಸಾತಿಹಾಳ, ದಿಂಡವಾರ, ಇಂಗಳೇಶ್ವರ, ಹೂವಿನಹಿಪ್ಪರಗಿ ಹಾಗೂ ದೇವರಹಿಪ್ಪರಗಿಗೆ ತೆರಳಬೇಕು.
ಈ ಗ್ರಾಮವು ಹೂವಿನಹಿಪ್ಪರಗಿ ಹಾಗೂ ದೇವರಹಿಪ್ಪರಗಿ ಮುಖ್ಯ ರಸ್ತೆಯಿಂದ ಮೂರು ಕಿ.ಮೀ. ಅಂತರದಲ್ಲಿದೆ. ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಬ್ಯಾಂಕ್ ಹಾಗೂ ಇತರೆ ಸರಕಾರಿ ಕೆಲಸಕ್ಕೆ ಪಟ್ಟಣದ ಕಡೆಗೆ ಮುಖ ಮಾಡಿದಾಗ ಮೊದಲು ಸಾರಿಗೆ ಸಮಸ್ಯೆ ಎದುರಾಗುತ್ತದೆ. ವಿಪರ್ಯಾಸವೆಂದರೆ ಇಲ್ಲಿ ಖಾಸಗಿ ವಾಹನದ ಸೌಲಭ್ಯವೂ ಇಲ್ಲ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಹೇಗೋ ನಡೆದುಕೊಂಡು ಹೋಗಾತ್ತಾರೆ. ಆದರೆ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ನಿತ್ಯ ಪರದಾಡುತ್ತಾರೆ.
ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮದ ಹಿರಿಯರು ಮತ್ತು ವಿದ್ಯಾರ್ಥಿಗಳು ಬಸವನಬಾಗೇವಾಡಿ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಹಾಗೂ ವಿಭಾಗೀಯ ಸಂಚಾರಿ ನಿಯಂತ್ರಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ. ಬರೀ ಅಧಿಕಾರಿಗಳಿಂದ ಭರವಸೆ ಮಾತುಗಳು ಸಿಕ್ಕಿವೆ. ಇನ್ನಾದರೂ ಸಂಬಂಧಿಸಿದ ರಾಜಕಾರಣಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಮೂಲ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.