ಜೇವರ್ಗಿ: ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಗಿವ್ ಆ್ಯಂಡ್ ಟೇಕ್ ಸರ್ಕಾರವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ|ಅಜಯಸಿಂಗ್ ಟೀಕಿಸಿದರು.
ತಾಲೂಕಿನ ಮದರಿ ಗ್ರಾಮದ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2021-22ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಅಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಬಿಜೆಪಿ ಸರ್ಕಾರ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ 30ಕೋಟಿ ಅನುದಾನ ನೀಡಿದರೇ, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 7ರಿಂದ 8 ಕೋಟಿ ರೂ. ಮಾತ್ರ ಅನುದಾನ ನೀಡುತ್ತಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜೇವರ್ಗಿ ಮತಕ್ಷೇತ್ರಕ್ಕೆ ಏಳು ಮೊರಾರ್ಜಿ ವಸತಿ ಶಾಲೆಗಳು ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಲು ಜೇವರ್ಗಿ, ಯಡ್ರಾಮಿ, ಇಜೇರಿ ಗ್ರಾಮ ಸೇರಿದಂತೆ ಒಟ್ಟು ಮೂರು ಮೌಲಾನಾ ಅಬುಲ್ ಕಲಾಂ ವಸತಿ ಶಾಲೆಗಳನ್ನು ಮಂಜೂರಿ ಮಾಡಲಾಗಿದೆ. ಕಳೆದ 2018ರಿಂದ ಮದರಿ ಮೊರಾರ್ಜಿ ಶಾಲೆ ಪ್ರಾರಂಭವಾಗಿದ್ದು, ಒಟ್ಟು 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬರುವ ಏಳೆಂಟು ತಿಂಗಳೊಳಗೆ ಕಾಮಗಾರಿ ಗುಣಮಟ್ಟದ ಜತೆಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಶಾಸಕನಾದ ನಂತರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಕಳೆದ ಐದು ವರ್ಷಗಳಲ್ಲಿ ಶಾಲೆ ಕೋಣೆಗಳ ನಿರ್ಮಾಣಕ್ಕೆ 50ರಿಂದ 60 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಕಟ್ಟಿಸಂಗಾವಿಯಿಂದ ಯನಗುಂಟಿ ವರೆಗೆ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಮದರಿ ಗ್ರಾಮದ ಹೊಸ ಬಡಾವಣೆ ರಸ್ತೆ ನಿರ್ಮಾಣಕ್ಕೆ 3ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಮದರಿ ಗ್ರಾಪಂ ಅದ್ಯಕ್ಷೆ ರೇಖಾ ಸಂಗಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ತಾಲೂಕು ಅಧಿ ಕಾರಿ ಶಕುಂತಲಾ, ಮುಖಂಡರಾದ ರಾಜಶೇಖರ ಸೀರಿ, ರುಕುಂ ಪಟೇಲ ಇಜೇರಿ, ಕಾಶಿರಾಯಗೌಡ ಯಲಗೋಡ, ಸತೀಶ ಸಾಹು ಠಾಕೂರ, ಮನೋಹರ ವಿಶ್ವಕರ್ಮ, ಶಿವಕುಮಾರ ಕಲ್ಲಾ, ಸಂತೋಷಗೌಡ ಯನಗುಂಟಿ, ಮಹಿಬೂಬ ಶಾನವಾಲೆ, ಇಬ್ರಾಹಿಂ ಮಿರ್ಚಿ, ಅಜ್ಜು ಲಕ್ಷುತಿ, ಮರೆಪ್ಪ ಸರಡಗಿ, ಸಂತೋಷ ಹಡಪದ, ರುಕುಂ ತೋಲಾ, ಗುರುಗೌಡ ಗಂವ್ಹಾರ, ಸಲಿಂ ಕಣ್ಣಿ, ಜಾವೀದ್ ಪಟೇಲ, ಆಫೊಜ್ ಯಡ್ರಾಮಿ, ಶಾಲೆಯ ಪ್ರಾಚಾರ್ಯ ರಮೇಶ ಹಾಗೂ ಶಾಲೆ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.