Advertisement

ನಾಟಕ ಪರಂಪರೆಗೆ ಕೊಡಿ ಪ್ರೋತ್ಸಾಹ

01:25 PM Mar 28, 2017 | |

ದಾವಣಗೆರೆ: ವಿಶ್ವ ಪರಂಪರೆಯೊಂದಿಗೆ ಬೆಳೆದು ಬಂದಿರುವ ನಾಟಕ ಪರಂಪರೆಯ ಉಳಿವು, ಬೆಳವಣಿಗೆಗೆ ಸರ್ಕಾರ ಇನ್ನೂ ಹೆಚ್ಚಿನ ಮಟ್ಟದ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಜಾನಪದ ತಜ್ಞ ಪ್ರೊ| ಬಾರಿಕೇರ ಕರಿಯಪ್ಪ ಒತ್ತಾಯಿಸಿದ್ದಾರೆ. 

Advertisement

ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಕಲಿಯದವರ ಕಾಮಧೇನು. 

ರಂಗಭೂಮಿಯಲ್ಲಿನ ಆಸಕ್ತಿ, ಕಲಾವಂತಿಕೆ ಮೈಗೂಡಿಸಿಕೊಂಡ ಸಾವಿರಾರು ಕಲಾವಿದರು ತಮ್ಮ ಬದುಕು ಕಟ್ಟಿಕೊಳ್ಳುವ ಜೊತೆಗೆ ಸಾಮಾಜಿಕ ಅರಿವು, ಜಾಗೃತಿ ಉಂಟು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಸಮಾಜದಲ್ಲಿನ ಆಗುಹೋಗು, ವಿದ್ಯಮಾನ, ಕೌಟಂಬಿಕ ವಿಷಯವನ್ನೇ ಕಥಾವಸ್ತುವನ್ನಾಗಿ ಮಾಡಿಕೊಂಡು ಪ್ರದರ್ಶಿತಗೊಂಡಿರುವ ಅನೇಕ ನಾಟಕಗಳು ಸಮಾಜ ಮಾತ್ರವಲ್ಲ ಬದುಕಿನ ಬಿರುಕುಗಳನ್ನು ಸಹ ಮುಚ್ಚಿವೆ. 

ಅಂತಹ ಶಕ್ತಿ ರಂಗಭೂಮಿಗೆ ಇದೆ. ಈ ಅಭಿಜಾತ ಪರಂಪರೆ, ಕಲಾವಿದರು, ರಂಗಾಸಕ್ತರು ಉಳಿಯುವ ಜೊತೆಗೆ ರಂಗಭೂಮಿ ಅಭಿವೃದ್ಧಿ ಆಗಬೇಕು. ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸುವ ಮಹತ್ತರ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. 

ಹಿರಿಯ ರಂಗಚೇತನ ದಿ. ಕಂಚಿಕೇರಿ ಶಿವಣ್ಣ ಕುರಿತು ಮಾತನಾಡಿದ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ, ಏಷ್ಯಾದಲ್ಲೇ ಗುಬ್ಬಿ ವೀರಣ್ಣನವರ ನಾಟಕ ಕಂಪನಿ ನಂತರ ಎರಡನೇ ಅತಿ ದೊಡ್ಡ ನಾಟಕ ಕಂಪನಿಯಾಗಿದ್ದ ಶ್ರೀ ಜಯಲಕ್ಷ್ಮಿ ನಾಟಕ ಸಂಘ ಮುನ್ನಡೆಸಿದಂತಹ ಕಂಚಿಕೇರಿ ಶಿವಣ್ಣನವರೇ ಒಂದು ಇತಿಹಾಸ. ಶ್ರೀ ಜಯಲಕ್ಷ್ಮಿ ನಾಟಕ ಸಂಘದ ಶತಮಾನೋತ್ಸವ ಆಚರಿಸಬೇಕು ಎಂಬ ಅವರ ಕನಸು ಈಡೇರಲೇ ಇಲ್ಲ ಎಂದು ಬೇಸರಿಸಿದರು. 

Advertisement

ರಂಗಭೂಮಿಗಾಗಿ ಸರ್ಕಾರವೇನೋ ಅನುದಾನ ನೀಡುತ್ತಿದೆ. ಆದರೆ, ಅದು ಯೋಜನಾಬದ್ಧವಾಗಿ ಬಳಕೆ ಆಗುತ್ತಲೇ ಇಲ್ಲ. ಯೋಜನಾಬದ್ಧವಾಗಿಯೇ ಅನುದಾನ ಬಳಕೆ ಆಗಬೇಕಿದೆ. ಇಂದಿನ ಯುವ ಜನಾಂಗಕ್ಕೆ ಬದುಕಿನ ಪಾಠ ಕಲಿಸುವ ಶಕ್ತಿ ಹೊಂದಿರುವ ವೃತ್ತಿ ರಂಗಭೂಮಿಯ ಪರಿಚಯ ಮಾಡಿಕೊಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು. 

ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಮನೋರಂಜನೆಯೇ ನಾಟಕಗಳ ಮುಖ್ಯ ಉದ್ದೇಶ ಅಲ್ಲ. ಜನಸಾಮಾನ್ಯರು ಎದುರಿಸುವ ಬವಣೆ, ಸಮಸ್ಯೆ, ದೌರ್ಜನ್ಯ, ಭ್ರಷ್ಟಾಚಾರ, ಸಮಾಜದ ಓರೆಕೋರೆಗಳ ಮೇಲೆ ತನ್ನದೇ ಧಾಟಿಯಲ್ಲಿ ಬೆಳಕು ಚೆಲ್ಲಿ, ಜಾಗೃತಿ ಮೂಡಿಸುವ ಪ್ರಯತ್ನವೂ ನಡೆಯುತ್ತದೆ. ಬೀದಿ ನಾಟಕಗಳು ಅಂತಹ ಕೆಲಸ ಮಾಡುತ್ತಿವೆ.

ವೃತ್ತಿ ರಂಗಭೂಮಿಯಂತಹ ಪ್ರಭಾವಿ ಮಾಧ್ಯುಮದಲ್ಲಿ ಹಿಂದಿದ್ದ ವೃತ್ತಿಪರತೆ, ಸಾಮಾಜಿಕ ಕಾಳಜಿ ಕಂಡು ಬರುತ್ತಿಲ್ಲ. ಇಂದಿನ ಕಲಾವಿದರಲ್ಲಿ ಉದಾಸೀನತೆ, ನಿರ್ಲಕ್ಷé ಭಾವನೆ, ರಂಗಾಸಕ್ತಿಯ ಕೊರತೆಯೇ ಹೆಚ್ಚಾಗಿ ಕಾಣ ಬರುತ್ತಿದೆ ಎಂದು ತಿಳಿಸಿದರು. ಮಹಾನಗರಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಮಾತನಾಡಿ, ವೃತ್ತಿ ರಂಗಭೂಮಿಯ ತವರೂರು ಎಂಬ ಖ್ಯಾತಿಯ ದಾವಣಗೆರೆಯಲ್ಲಿ ಹಿಂದಿದ್ದಂತಹ ರಂಗಭೂಮಿಯ ಪ್ರಭಾವ ಇಲ್ಲ.

ಆದರೂ, ವಿವಿಧ ಪ್ರಭಾವಗಳ ಮಧ್ಯದಲ್ಲಿಯೂ ರಂಗಭೂಮಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಾಜ್ಯ ಅಧ್ಯಕ್ಷ ಎ. ಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಬಸವರಾಜ್‌ ಐರಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next