ಕೆ.ಆರ್.ನಗರ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಮನೆಗಳು ಮತ್ತು ಬೆಳೆಗಳಿಗೆ ಪರಿಹಾರ ನೀಡಲು ಸಮರ್ಪಕವಾಗಿ ವರದಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ವರದಿ ಸಿದ್ಧಪಡಿಸಲು ವಿಫಲ: ತಾಲೂಕಿನಲ್ಲಿ 132 ಮನೆಗಳು ಹಾನಿಗೊಳಗಾಗಿರುವುದರ ಜತೆಗೆ ಸಾಕಷ್ಟು ರೈತಾಪಿ ವರ್ಗದವರ ಬೆಳೆ ನಷ್ಟವಾಗಿದ್ದು, ಏಳು ಪ್ರಾಣಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ. ಆದರೆ ಹಾನಿ ಮತ್ತು ನಷ್ಟ ಸಂಭವಿಸಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಮರ್ಪಕವಾದ ವರದಿ ತಯಾರಿಸಲು ವಿಫಲವಾಗಿದ್ದಾರೆ. ಕೂಡಲೇ ಇತರ ಇಲಾಖೆ ಅಧಿಕಾರಿಗಳ ಸಹಾಯ ಮತ್ತು ಸಲಹೆ ಪಡೆದು ತಪ್ಪಾಗಿರುವ ವರದಿ ಸರಿಪಡಿಸಿ ಎಂದು ಶಾಸಕರು ಸೂಚನೆ ನೀಡಿದರು.
ಧಾರಾಕಾರವಾಗಿ ಸುರಿದ ಮಳೆಯಿಂದ ಬಿದ್ದು ಹೋಗಿರುವ ಮನೆಗಳನ್ನು ವೀಡಿಯೋ ಚಿತ್ರೀಕರಣ ಮಾಡಿ ತಹಶೀಲ್ದಾರರಿಗೆ ಸಲ್ಲಿಸಬೇಕು. ನಂತರ ನಾನು ಉಪಭಾಗಾಧಿಕಾರಿ ಮತ್ತು ತಹಶೀಲ್ದಾರರೊಡನೆ, ಪರಿಶೀಲಿಸಿ ಅಗತ್ಯ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಶಾಸಕರು ಈ ವರದಿಯಲ್ಲಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.
ನಿಯಮಾನುಸಾರ ಶುಲ್ಕ ನಿಗದಿಪಡಿಸಿ: ತಾಲೂಕಿನ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸುವವರಿಗೆ ಸರ್ಕಾರದ ನಿಯಮಾನುಸಾರ ಶುಲ್ಕ ನಿಗದಿಪಡಿಸಬೇಕು. ಅವರು ಅಕ್ರಮವಾಗಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈ ಸವಲತ್ತಿನಿಂದ ಕೆಲವರಿಗೆ ಅನುಕೂಲ ದೊರೆಯದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇನ್ನೊಂದು ವಾರದಲ್ಲಿ ಲೀಡ್ ಬ್ಯಾಂಕಿನ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ತಿಳಿಸಿದ ಶಾಸಕರು ಸಾಲ ಮನ್ನಾ ಅನುಕೂಲ ಆಗದಿರುವ ರೈತರ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಶೀಲ್ದಾರ್ ಎಂ.ಮಂಜುಳಾ, ಇಒ ಎಂ.ಎಸ್.ರಮೇಶ್, ಪುರಸಭೆ ಸದಸ್ಯ ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ಎಪಿಎಂಸಿ ಅಧ್ಯಕ್ಷ ಕುಪ್ಪಹಳ್ಳಿಸೋಮುಶೇಖರ್, ಬಿಇಒ ಎಂ.ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಕೆ.ಆರ್.ಮಹೇಂದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ, ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅರ್ಕೇಶ್‌ಮೂರ್ತಿ, ಕರೀಗೌಡ, ಅರುಣ್‌ಕುಮಾರ್, ಗೋಪಾಲಗೌಡ, ಮಹದೇವ್ ಮತ್ತಿತರರು ಹಾಜರಿದ್ದರು.