ಬೀದರ: ಬೀದರ ಮತ್ತು ಯಾದಗಿರಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಯಾವುದೇ ರೀತಿಯ ಕೊರತೆ, ಸಮಸ್ಯೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಉಭಯ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ಬ್ರಿಮ್ಸ್ ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ.
ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಅವರಿಗೆ ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ಸದ್ಯದ ಸರ್ಕಾರದ ಆದ್ಯತೆಯಾಗಿದೆ. ವೈದ್ಯರನ್ನು ನಂಬಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಯಾರನ್ನೂ ತಾರತಮ್ಯದಿಂದ ಕಾಣಬಾರದು. ಈ ವಿಷಯದಲ್ಲಿ ನಿರ್ಲಕ್ಷ್ಯಸಹಿಸಲ್ಲ ಎಂದು ದೂರವಾಣಿ ಮೂಲಕ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಮಯಕ್ಕೆ ಸರಿಯಾಗಿ ಔಷಧೋಪಚಾರ ಲಭಿಸಲಿ: ಐಸೋಲೇಷನ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳಿಗೆ ಸಮಯಕ್ಕನುಗುಣವಾಗಿ ಸಮರ್ಪಕ ಔಷಧೋಪಚಾರ ನಡೆಸಬೇಕು. ರೋಗಿಗಳು ಶೀಘ್ರ ಗುಣಮುಖರಾಗಿ ಖುಷಿಯಿಂದ ಮರಳಿ ಮನೆಗೆ ಹೋಗುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ರೋಗಿಗಳಿಗೆ ಊಟ, ಉಪಹಾರ ನೀಡುವ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ, ಶೌಚಗೃಹ, ಸ್ನಾನ ಗೃಹದ ಸಮಸ್ಯೆ ಬಗ್ಗೆ ಆರೋಪ ಬರುತ್ತಿವೆ. ವೈದ್ಯರು ಸಹ ನಿಯಮಿತವಾಗಿ ಐಸೋಲೇಷನ್ ವಾರ್ಡ್‌ಗೆ ಬಂದು ರೋಗಿಗಳ ತಪಾಸಣೆ ಮಾಡುತ್ತಿಲ್ಲ ಎಂಬ ದೂರು ಸಹ ಬರುತ್ತಿವೆ. ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು.
ಆಂಬ್ಯುಲೆನ್ಸ್‌ಗಳು ಸಜ್ಜಾಗಿರಲಿ: ಹೊಸ ರೋಗಿಗಳು ಮತ್ತು ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯ ಚುರುಕಾಗಿ ನಡೆಯಬೇಕು. ಸಹಾಯವಾಣಿ ಸಂಖ್ಯೆಗಳಿಗೆ ಬರುವ ಕರೆಗಳನ್ನು ನಿರ್ಲಕ್ಷಿಸಬಾರದು. ಜಿಲ್ಲೆಯ ಎಲ್ಲೆಡೆ ಆಂಬ್ಯುಲೆನ್ಸ್ ಗಳು ಸಜ್ಜಾಗಿರಬೇಕು. ಕರೆ ಬಂದ ತಕ್ಷಣ ರೋಗಿಗಳನ್ನು ಕರೆತರುವ ಕೆಲಸವಾಗಬೇಕು ಎಂದು ಸೂಚಿಸಿದ್ದಾರೆ.
ಐಸೋಲೇಷನ್ ವಾರ್ಡ್ ಆರಂಭಿಸಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಸವಕಲ್ಯಾಣ, ಚಿಟಗುಪ್ಪ ಮಾದರಿಯಲ್ಲಿ ಆದಷ್ಟು ಬೇಗ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸ್ಥಾಪಿಸಿ ಲಕ್ಷಣ ರಹಿತ ಸೋಂಕಿತರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು. ವಾರದೊಳಗೆ ಎಲ್ಲ ತಾಲೂಕಿನಲ್ಲಿ ಈ ಸೇವೆ ಆರಂಭಿಸಬೇಕು.