Advertisement

ದಂಡದ ಬದಲು ಹೆಲ್ಮೆಟ್‌ ನೀಡಿ ಜಾಗೃತಿ

08:19 PM Dec 10, 2019 | Team Udayavani |

ಚಾಮರಾಜನಗರ: ಹೆಲ್ಮೆಟ್‌ ರಹಿತ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವ ಬದಲು 750 ರೂ. ಗೆ ಹೆಲ್ಮೆಟ್‌ ನೀಡಿ ಜಾಗೃತಿ ಮೂಡಿಸುವ ವಿನೂತನ ಅಭಿಯಾನವನ್ನು ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಆರಂಭಿಸಲಾಗಿದೆ.

Advertisement

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ದ್ವಾರದಲ್ಲಿ ಈ ಅಭಿಯಾನ ಮತ್ತು ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸಿ ಎಂಬ ಬೈಕ್‌ ಜಾಥಾಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ಮಂಗಳವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸದೇ ಬೈಕ್‌ ಚಾಲನೆ ಮಾಡುತ್ತಿದ್ದ ಸವಾರರೋರ್ವರನ್ನು ನಿಲ್ಲಿಸಿ, ಅವರಿಗೆ ಹೆಲ್ಮೆಟ್‌ನ ಮಹತ್ವ ವಿವರಿಸಿ, ದಂಡದ ಬದಲು 750 ರೂ. ನೀಡಿ ಹೆಲ್ಮೆಟ್‌ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಹೊಸ ಅಭಿಯಾನ ಶುರು: ಬಳಿಕ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಆನಂದಕುಮಾರ್‌, ಸಾಕಷ್ಟು ದಂಡ ವಿಧಿಸಿದರೂ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವ ವಾಹನ ಸವಾರರು ಇನ್ನೂ ಇದ್ದಾರೆ. ಅಂಥವರಿಗೆ ಜಾಗೃತಿ ಮೂಡಿಸಲು ಈ ಹೊಸ ಅಭಿಯಾನ ಶುರು ಮಾಡಲಾಗಿದೆ. ಹೆಲ್ಮೆಟ್‌ ಧರಿಸದೇ ಚಾಲನೆ ಮಾಡುವ ದ್ವಿಚಕ್ರ ವಾಹನ ಸವಾರರಿಗೆ 500 ರೂ. ದಂಡ ವಿಧಿಸುವುದಕ್ಕೆ ಅವಕಾಶವಿದೆ. ದಂಡದ ಬದಲಾಗಿ 500 ರೂ. ಜೊತೆಗೆ ಹೆಚ್ಚುವರಿ 250 ರೂ. ಪಡೆದು ಅಂಥ ವಾಹನ ಸವಾರರಿಗೆ ಪೊಲೀಸರಿಂದಲೇ ಹೆಲ್ಮೆಟ್‌ ನೀಡಲಾಗುವುದು ಎಂದರು.

750 ರೂ. ಪಡೆದು ಹೆಲ್ಮೆಟ್‌ ವಿತರಣೆ: ಇದು ಐಎಸ್‌ಐ ಮಾರ್ಕಿನ ಹೆಲ್ಮೆಟ್‌, ಪ್ರತಿ ಹೆಲ್ಮೆಟ್‌ಗೆ ಗರಿಷ್ಠ ಮಾರಾಟ ದರ 1200 ರೂ. ಪೊಲೀಸ್‌ ಕ್ಯಾಂಟೀನ್‌ನಿಂದ ಇದನ್ನು ತಲಾ 700 ರೂ.ಗೆ ಖರೀದಿಸಲಾಗಿದೆ. ಹೆಲ್ಮೆಟ್‌ ರಹಿತ ಸವಾರರು ಪೊಲೀಸರಿಗೆ ಕಂಡು ಬಂದರೆ ಅವರಿಗೆ ದಂಡದ ಬದಲು, 750 ರೂ. ಕಟ್ಟಿಸಿಕೊಂಡು ಈ ಹೆಲ್ಮೆಟ್‌ ನೀಡುತ್ತಾರೆ ಎಂದರು.

ಬೈಕ್‌ ಜಾಥಾ: ಇದೇ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಯಿಂದ ಬೈಕ್‌ ಜಾಥಾವನ್ನು ಕೂಡ ಹಮ್ಮಿಕೊಂಡಿದ್ದೇವೆ. ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸಿ ಎಂಬ ಘೋಷಣೆ ಮೂಲಕ ಪೊಲೀಸರು ಅರಿವು ನಾಗರಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದರು.

Advertisement

ಅಪಘಾತ ಪ್ರಕರಣಗಳು: ಜಿಲ್ಲಾ ವ್ಯಾಪ್ತಿಯಲ್ಲಿ 2017ರಲ್ಲಿ ಒಟ್ಟಾರೆ 779 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 165 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2018ರಲ್ಲಿ 812 ಪ್ರಕರಣಗಳು ದಾಖಲಾಗಿದ್ದು, 162 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2019ರಲ್ಲಿ 815 ಪ್ರಕರಣಗಳು ದಾಖಲಾಗಿದ್ದು 142 ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

1.69 ಕೋಟಿ ರೂ. ದಂಡ: ವಾಹನ ಚಾಲನೆಯಲ್ಲಿ ತಪ್ಪೆಸಗಿದವರಿಂದ ದಂಡ ವಸೂಲಿ ಮಾಡಲಾಗಿದೆ. 2017ರಲ್ಲಿ 1.15 ಕೋಟಿ ರೂ., 2018ರಲ್ಲಿ 1.35 ಕೋಟಿ ರೂ. 2019ರಲ್ಲಿ 1.69 ಕೋಟಿ ರೂ. ದಂಡ ಸಂಗ್ರಹವಾಗಿದೆ. ದಂಡದ ಮೊತ್ತ ಏರಿಕೆಯಾದ ನಂತರ ಅಕ್ಟೋಬರ್‌ನಿಂದೀಚಿಗೆ 2831 ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್‌ನಲ್ಲಿ 11.23 ಲಕ್ಷ ರೂ. ನವೆಂಬರ್‌ನಲ್ಲಿ 23.85 ಲಕ್ಷ ರೂ. ದಂಡ ಸಂಗ್ರಹವಾಗಿದೆ ಎಂದು ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ರಸ್ತೆಯಲ್ಲಿ ಒಕ್ಕಣೆ ಮಾಡುವುದರ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ರಸ್ತೆ ನಿರ್ಮಾಣ: ಎಂಜಿನಿಯರ್‌ ಮೇಲೂ ಪ್ರಕರಣ
ಚಾಮರಾಜನಗರ: ವಾಹನ ಅಪಘಾತ ಸಂದರ್ಭದಲ್ಲಿ ರಸ್ತೆಯ ಅವ್ಯವಸ್ಥೆ ಅಪಘಾತಕ್ಕೆ ಕಾರಣವಾಗಿದ್ದರೆ, ಅದರ ಎಂಜಿನಿಯರ್‌ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಆನಂದಕುಮಾರ್‌ ತಿಳಿಸಿದರು. ಇದಕ್ಕಾಗಿ ಒಂದು ವಿಶೇಷ ತಂಡ ರಚಿಸಲಾಗುವುದು. ಅದರಲ್ಲಿ ಪೊಲೀಸರು, ಆರ್‌ಟಿಒ, ಪಿಡಬ್ಲೂಡಿ ಅಧಿಕಾರಿಗಳಿರುತ್ತಾರೆ. ಆ ತಂಡ ರಸ್ತೆ ಅಪಘಾತ ಯಾವ ಕಾರಣಕ್ಕಾಗಿ ಆಗಿದೆ? ರಸ್ತೆಯ ಅವ್ಯವಸ್ಥೆಯಿಂದಲೋ? ವಾಹನ ದೋಷದಿಂದಲೋ?

ಸವಾರನ ತಪ್ಪಿನಿಂದಲೋ? ಅಥವಾ ಬೇರೊಂದು ವಾಹನ ಸವಾರನ ಆಜಾಗರೂಕತೆಯಿಂದಲೋ? ಎಂಬುದನ್ನು ಸಮಗ್ರವಾಗಿ ಪರಿಶೀಲಿಸುತ್ತದೆ. ಬಳಿಕ ವರದಿ ನೀಡುತ್ತದೆ. ಆ ವರದಿಯಲ್ಲಿ ವಾಹನ ಅಪಘಾತಕ್ಕೆ ಕೆಟ್ಟ ರಸ್ತೆ ಕಾರಣವಾಗಿದ್ದರೆ, ರಸ್ತೆಗೆ ಸಂಬಂಧಿಸಿದ ಎಂಜಿನಿಯರ್‌ ಅವರನ್ನೇ ಆರೋಪಿಗಳನ್ನಾಗಿ ಪ್ರಕರಣ ದಾಖಲಿಸಲು ನಮ್ಮ ಸಿಬ್ಬಂದಿಗೆ ನಿರ್ದೇಶನ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next