Advertisement

ಮರಳು ಸಮಸ್ಯೆಗೊಂದು ಸೌಹಾರ್ದ ಪರಿಹಾರ ನೀಡಿ

05:23 PM Sep 26, 2018 | Team Udayavani |

ಭಟ್ಕಳ: ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮರಳು ಪೂರೈಕೆ ಆರಂಭವಾಗದೆ ಜನರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಭಾಗದ ಶಾಸಕರ ಸಭೆ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

Advertisement

ಮರಳು ಸಮಸ್ಯೆಗೊಂದು ಸೌಹಾರ್ದ ಪರಿಹಾರ ಕಂಡುಕೊಳ್ಳಬೇಕು. ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಈಗಾಗಲೇ ಜನರು ತುಂಬಾ ಸಂಕಷ್ಟದಲ್ಲಿದ್ದು, ಮರಳು ಸರಬರಾಜಾಗದೇ ಇರುವುದರಿಂದ ಕೂಲಿ ಕಾರ್ಮಿಕರೂ ಕೂಡಾ ತೀರಾ ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಸುನೀಲ್‌ ನಾಯ್ಕ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.

ಕಳೆದ 7-8 ತಿಂಗಳುಗಳಿಂದ ಮರಳಿನ ಪೂರೈಕೆಯಿಲ್ಲದೇ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧವಾಗಿದೆ. ಜಿಲ್ಲೆಯ ಮಾರುಕಟ್ಟೆಯಲ್ಲಿ ವ್ಯವಹಾರಗಳು ಕೂಡಾ ಸ್ತಬ್ಧವಾಗಿದ್ದು, ಕಟ್ಟಡ ನಿರ್ಮಾಣಗಳು ನಿಂತಿರುವುದರಿಂದ ಸಾವಿರಾರು ಕಾರ್ಮಿಕರು ಕೂಲಿಯಿಂದ ವಂಚಿತರಾಗಿದ್ದಾರೆ. ಕುಟುಂಬದ ಆರೋಗ್ಯ, ಶಿಕ್ಷಣ, ಆಹಾರದ ಮೇಲೆ ಪರಿಣಾಮ ಬೀರಿದೆ. ಕಟ್ಟಡ ನಿರ್ಮಾಣವನ್ನು ಅವಲಂಬಿಸಿರುವ ಸೆಂಟ್ರಿಂಗ್‌, ಇಟ್ಟಿಗೆ, ಕೆಂಪು ಕಲ್ಲು, ಸಿಮೆಂಟ್‌, ಕಟ್ಟಿಗೆ, ಪೇಂಟಿಂಗ್‌ ಮತ್ತಿತರೆ ಕ್ಷೇತ್ರದ ಕಾರ್ಮಿಕರು ಅಕ್ಷರಸಹ ಬೀದಿಗೆ ಬಂದಿದ್ದು, ಇನ್ನು ಅವರಲ್ಲಿ ತಡೆದುಕೊಳ್ಳುವಷ್ಟೂ ಶಕ್ತಿ ಇಲ್ಲವಾಗಿದೆ ಎಂದು ಶಾಸಕರು ಮನವರಿಕೆ ಮಾಡಿದರು.

ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿಯಿಲ್ಲದೆ, ಸರ್ಕಾರದ ವಸತಿ ನಿರ್ಮಾಣ, ಶೌಚಾಲಯ ನಿರ್ಮಾಣ ಹಾಗೂ ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದ ಕಾಮಗಾರಿಗಳಿಗೆ ಮರಳು ಪೂರೈಕೆಯಿಲ್ಲದೆ ಕಾಲಮಿತಿಯಲ್ಲಿ ಮುಕ್ತಾಯಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಅಂದಾಜು ವೆಚ್ಚದಲ್ಲಿ ಏರು ಪೇರಾಗುವ ಸಾಧ್ಯತೆಯಿದ್ದು, ಇದು ಸರ್ಕಾರದ ಆರ್ಥಿಕ  ಭಾಗಕ್ಕೂ ಪರಿಣಾಮ ಬೀರುವ ಮುನ್ನ ಸರಕಾರ ಗಂಭೀರವಾಗಿ ಪರಿಗಣಿಸಿ ಮರಳು ಪೂರೈಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಲಾಯಿತು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಉಡುಪಿ ಮತ್ತು ದಕ್ಷಿಣ ಕನ್ನಡ ಶಾಸಕರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next