ಇದು ದಿ. ಪ್ರೊ. ಎಲ್.ಎಸ್. ಶೇಷಗಿರಿರಾಯರು ಹೇಳಿದ ಪ್ರಸಂಗ. ಇದು ಅವರ ಒಂದು ಪುಸ್ತಕದಲ್ಲಿಯೂ ದಾಖಲಾಗಿದೆ. ಅವರ ಮಿತ್ರರೊಬ್ಬರು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರಂತೆ. ಒಂದು ದಿನ ಸಂಜೆ ಕೆಲಸ ಮುಗಿದು ಹಣ ಎಣಿಸಿದಾಗ, ಹತ್ತು ಸಾವಿರ ಕಡಿಮೆ ಬಂತಂತೆ. (ಇದು ಸುಮಾರು 30 ವರ್ಷದ ಹಿಂದೆ ನಡೆದದ್ದು. ಅಂದಿನ ಹತ್ತು ಸಾವಿರ ಅಂದರೆ, ಇಂದಿನ ಒಂದು ಲಕ್ಷಕ್ಕೆ ಸಮ!) ಮ್ಯಾನೇಜರರು- “ನೋಡಿ, ನೀವು ನಿಷ್ಠಾವಂತ ನೌಕರರೆಂದು ಗೊತ್ತು. ಆದರೆ, ಏನೂ ಮಾಡಲಾಗದು. ನಾಳೆ ಬೆಳಗ್ಗೆಯ ಹೊತ್ತಿಗೆ ಹೇಗಾದರೂ ಮಾಡಿ ಆ ಹಣ ಹೊಂದಿಸಿ. ಇಲ್ಲವಾದರೆ, ಪೊಲೀಸರಿಗೆ ಹೇಳಲೇ ಬೇಕಾಗುತ್ತದೆ. ನನ್ನಿಂದೇನೂ ಮಾಡಲಾಗದು. ತೀರಾ ಹೆಚ್ಚೆಂದರೆ, ನಿಮ್ಮ ಹೆಸರಿನಲ್ಲಿ ಒಂದು ಸಾಲದ ಖಾತೆ ತೆರೆಯಬಹುದು’ ಅಂದರಂತೆ. ಮನೆಗೆ ಬಂದ ಇವರು ರಾಮಾಯಣ ಓದಿ, ಅಂತಹ ಮಹಾನುಭಾವ ಶ್ರೀರಾಮ ಚಂದ್ರನಿಗೇ ಅಷ್ಟು ಕಷ್ಟ ಬಂದಾಗ, ನಮ್ಮದೇನು ಮಹಾ! ಎಂದುಕೊಂಡು ಬ್ಯಾಂಕಿಗೆ ಹೋದರೆ, ಅಲ್ಲಿದ್ದ ಒಬ್ಬರು, “ನಿನ್ನೆ ನಗದು ಕೊಡುವಾಗ ಒಂದು ಕಟ್ಟು ಹೆಚ್ಚಿಗೆ ಕೊಟ್ಟಿದ್ದೀರಿ’ ಎಂದು ಹೇಳಿ ಹತ್ತು ಸಾವಿರ ರೂಪಾಯಿಗಳನ್ನು ಹಿಂದಿರುಗಿಸಿದರಂತೆ!!
ಸಂಗ್ರಹ- ಕಲ್ಗುಂಡಿ ನವೀನ್