ಎಚ್.ಡಿ.ಕೋಟೆ: ರೈತರ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಪಟ್ಟಣದ ಸೆಸ್ಕ್ ಉಪವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಕ್ಕೂ ಹೆಚ್ಚು ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡರಾದ ಭೀಮನಹಳ್ಳಿ ಮಹದೇವು, ಹೂ. ಕೆ.ಮಹೇಂದ್ರ, ಪಳನಿಸ್ವಾಮಿ, ಗ್ರಾಮೀಣ ಪ್ರದೇಶದಲ್ಲಿ ಹಗಲಿನ ವೇಳೆ 12 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಬೇಕು, ಮೂರ್‍ನಾಲ್ಕು ಪಂಪ್‌ಸೆಟ್‌ಗಳಿಗೆ ಒಂದು ವಿದ್ಯುತ್ ಪರಿವರ್ತಕ ಅಳವಡಿಸಬೇಕು, ಟೀಸಿಗಳು ಕೆಟ್ಟರೆ ಮೂರ್‍ನಾಲ್ಕು ದಿನದೊಳಗೆ ಸರಿಪಡಿಸಬೇಕು, ಕ್ಯಾತನಹಳ್ಳಿ, ಹಿರೇಹಳ್ಳಿ ಮತ್ತಿತರ ಗ್ರಾಮಗಳ ಮನೆಗಳ ಮೇಲೆ ಹಾಯ್ದು ಹೋಗಿರುವ ಹೈಟೆನ್ಶನ್ ವಿದ್ಯುತ್ ತಂತಿಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ನಿರಂತರ ಜ್ಯೋತಿ, ಭಾಗ್ಯ ಜ್ಯೋತಿಯಡಿ ಸಂಪರ್ಕ ಪಡೆದಿರುವ ಮನೆಗಳಿಗೆ ಸರಾಸರಿ ದರ ನಿಗದಿಪಡಿಸಬೇಕು. ಬೇಕಾಬಿಟ್ಟಿಯಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ನಿಯೋಜಿಸಿರುವ ನೌಕರರು ತ್ವರಿತವಾಗಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೇಜವಾಬ್ದಾರಿ ತೋರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುರಿತು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸೆಸ್ಕ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್, ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಕೈಗೊಂಡು, ಶೀಘ್ರ ಸರ್ಕಾರದ ಗಮನಕ್ಕೆ ತರವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಜಕ್ಕಳ್ಳಿ ರವಿಕುಮಾರ್, ಪ್ರಗತಿಪರ ರೈತರಾದ ಸಾಹಿತಿ ಕ್ಷೀರಸಾಗರ್, ಮುಖಂಡರಾದ ಜೆ.ಪಿ.ನಾಗರಾಜ್, ಬಸವರಾಜು, ಲಿಂಗಯ್ಯ, ಮಹದೇವನಾಯ್ಕ, ಪ್ರಸಾದ್, ಶಿವಲಿಂಗಪ್ಪ, ಹರೋಪುರ ಮಂಜುನಾಥ್, ಬೋರ್‌ವೆಲ್ ದಯಾನಂದ್, ಜೆ.ಪಿ.ಸಂತೋಷ್, ಮಲ್ಲಪ್ಪ, ದೇವರಾಜ್, ನೀಲಪ್ಪ, ಬೋಪ್ಪನಹಳ್ಳಿ ಶಿವಣ್ಣ ಇತರರು ಹಾಜರಿದ್ದರು.