Advertisement

ಸಮಸ್ಯೆಗಳ ಸುಳಿಯಲ್ಲಿ ಬಾಲಕಿಯರ ವಸತಿ ನಿಲಯ

01:00 PM Jan 26, 2018 | Team Udayavani |

ಅಫಜಲಪುರ: ಇಲ್ಲಿನ ಮೆಟ್ರಿಕ್‌ ನಂತರದ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಸತಿ ನಿಲಯದ ಸಮಸ್ಯೆಗಳಿಗೆ ಸಂಬಂಧಪಟ್ಟವರು ಪರಿಹಾರ ನೀಡುತ್ತಿಲ್ಲ ಎಂದು ವಸತಿ ನಿಲಯದ ವಿದ್ಯಾರ್ಥಿನಿಯರು ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ಅವರಲ್ಲಿ ಅಳಲು ತೋಡಿಕೊಂಡರು.

Advertisement

ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ ಅವರು ಪಟ್ಟಣದ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಂಡರು.

ಕಳೆದ ಐದಾರು ವರ್ಷಗಳಿಂದ ವಿದ್ಯಾರ್ಥಿನಿಯರು ಸೌಲಭ್ಯಗಳಿಲ್ಲದೆ ಪರದಾಡುತ್ತಿರುವುದನ್ನು ಅರಿತು, ಈ ಕುರಿತು ಜ. 30ರಂದು ನಡೆಯುವ ಜಿ.ಪಂ ಸಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸೌಲಭ್ಯ ಕಲ್ಪಿಸುವುದಾಗಿ ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು. ಮೇನು ಕಾರ್ಡ್‌ ಪ್ರಕಾರ ಊಟ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಒಟ್ಟು 63 ವಿದ್ಯಾರ್ಥಿನಿಯರಿದ್ದೇವೆ.
 
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಎಲ್ಲರಿಗೂ ಒಂದೇ ಶೌಚಾಲಯವಿದೆ. ಸರಿಯಾದ ಸ್ನಾನದ ಕೋಣೆಗಳಿಲ್ಲ. ಗಣಕ ಯಂತ್ರಗಳಿವೆ, ಆದರೆ ಹೇಳಿಕೊಡುವವರಿಲ್ಲ. ಹಾಸಿಗೆ-ಹೊದಿಕೆಗಳಿದ್ದರೂ ಮಲಗಲು ಒಳ್ಳೆಯ ವ್ಯವಸ್ಥೆ ಇಲ್ಲ. ಒಟ್ಟಿನಲ್ಲಿ ವಸತಿ ನಿಲಯವೆಂಬುದು ಜೈಲಿನ ಹಾಗಾಗಿದೆ ಎಂದು ವಿದ್ಯಾರ್ಥಿನಿಯರು ಜಿ.ಪಂ ಉಪಾಧ್ಯಕ್ಷರ ಬಳಿ
ಅಳಲು ತೋಡಿಕೊಂಡರು. 

ವಿದ್ಯಾರ್ಥಿನಿಯರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧ ಪಟ್ಟ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಿಸಿಎಂ ಇಲಾಖೆ ಅಧಿಕಾರಿ ಎಸ್‌.ಎನ್‌. ಗಿಣ್ಣಿ ಅವರಿಗೆ ಜಿಪಂ ಉಪಾಧ್ಯಕ್ಷರು ಸೂಚಿಸಿದರು.

ಅಧಿಕಾರಿ ಎಸ್‌.ಎನ್‌. ಗಿಣ್ಣಿ ಮಾಹಿತಿ ನೀಡಿ, ಎಚ್‌ಕೆಆರ್‌ಡಿಬಿಯಿಂದ ಮಲಗುವ ಹಾಸಿಗೆ ನೀಡಲಾಗಿದೆ. ಅವುಗಳನ್ನು ಇಡಲು ಜಾಗವಿಲ್ಲ, ಶೌಚಾಲಯದ ಸಮಸ್ಯೆ ಇದೆ. ಅದನ್ನು ಬಗೆ ಹರಿಸುತ್ತೇನೆ. ಸ್ನಾನಕ್ಕಾಗಿ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

Advertisement

ಅನುದಾನ ಗೋಲ್‌ಮಾಲ್‌ ಶಂಕೆ ಒಬ್ಬ ವಿದ್ಯಾರ್ಥಿನಿಗೆ ತಿಂಗಳಿಗೆ 1500 ರೂ. ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ.
ವಾರ್ಷಿಕ ಕೋಟಿ ರೂ. ಅನುದಾನ ನೀಡುತ್ತಿದೆ. ಇಲ್ಲಿನ ಅವ್ಯವಸ್ಥೆ ನೋಡಿದರೆ ಅನುದಾನವೆಲ್ಲವೂ ಗೋಲ್‌ಮಾಲ್‌
ಆಗುತ್ತಿದೆ ಎನ್ನುವ ಅನುಮಾನ ಕಾಡುತ್ತದೆ. ಈ ಕುರಿತು ತನಿಖೆಗೆ ಆಗ್ರಹಿಸುತ್ತೇನೆ.
 ಶೋಭಾ ಶಿರಸಗಿ, ಜಿಪಂ ಉಪಾಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next