ಚಂಡೀಗಢ: ಆ ಕಂದಮ್ಮಳಿಗೆ ಇನ್ನೂ ಹತ್ತರ ಹರೆಯ. ಸಣ್ಣ ವಿಷಯಕ್ಕೂ ಹಠ ಮಾಡುವ ವಯಸ್ಸು. ಸರಿ, ತಪ್ಪುಗಳ ಬಗ್ಗೆ ಸ್ಪಷ್ಟವಾಗಿ ಗೊತ್ತಿಲ್ಲ. ಶಾಲೆಯಲ್ಲಿ ಹೇಳಿಕೊಡುವುದನ್ನು ಕಲಿಯುವುದು, ಓರಗೆಯ ಮಕ್ಕಳೊಂದಿಗೆ ಆಡುವುದೇ ಆಕೆಯ ಪ್ರಪಂಚ. ಈ ವಯಸ್ಸಿನಲ್ಲಿ ತಾಯ್ತನದ ಬಗ್ಗೆ ಪಾಪ ಆಕೆಗೇನು ಗೊತ್ತಿರಲು ಸಾಧ್ಯ? ಆದರೂ ಈ 10 ವರ್ಷದ ಬಾಲಕಿ ಈಗ ಒಂದು ಮಗುವಿನ ತಾಯಿ!
ಹೌದು, ಚಂಡೀಗಢದ 10ರ ಹರೆಯದ ಬಾಲಕಿ ಇಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ತಾನು ತಾಯಿಯಾಗಿದ್ದೇನೆ, ತನ್ನ ಉದರದಿಂದ ಮಗುವೊಂದು ಹೊರಬಂದಿದೆ ಎಂಬುದು ಆಕೆಗೆ ಗೊತ್ತಿಲ್ಲ. “ಹೊಟ್ಟೆ ಕೆಟ್ಟು ಊದಿ ಕೊಂಡಿತ್ತು. ಅದರಲ್ಲೊಂದು ಕಲ್ಲಿದೆ. ಅದಕ್ಕೆ ಆಪರೇಷನ್ ಮಾಡಿ ಸರಿ ಮಾಡಿದ್ದಾರೆ’ ಎಂದು ಹೆತ್ತವರು ಹೇಳಿದ್ದನ್ನೇ ಆ ಮುಗೆœ ನಂಬಿದ್ದಾಳೆ.
ಘಟನೆ ನಡೆದಿರುವುದು ಚಂಡೀಗಢದಲ್ಲಿ. ಈಗ ಮಗುವಿಗೆ ಜನ್ಮ ನೀಡಿರುವ ಬಾಲಕಿಯ ಮೇಲೆ ಆಕೆಯ ಹತ್ತಿರದ ಸಂಬಂಧಿಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಆದರೆ ಆತ ಏನು ಮಾಡುತ್ತಿದ್ದಾನೆಂದು ಬಾಲಕಿಗೆ ಗೊತ್ತೇ ಇರಲಿಲ್ಲ. ಆದರೆ ಕಳೆದ ತಿಂಗಳು ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭ ಧರಿಸಿದ ವಿಷಯ ಹೆತ್ತವರಿಗೆ ಗೊತ್ತಾಗಿದೆ. ಹಾಗೇ ಕಾಮುಕ ಚಿಕ್ಕಪ್ಪನ ಬಣ್ಣ ಕೂಡ ಬಯಲಾಗಿತ್ತು. ಕೂಡಲೆ ಹೆತ್ತವರು ಕೋರ್ಟ್ ಮೊರೆ ಹೋಗಿ, “ಅವಳೇ ಮಗು, ಅವಳಿಗೊಂದು ಮಗು ಬೇಕೇ? ತೆಗೆಸಲು ಅನುಮತಿ ಕೊಡಿ’ ಎಂದು ಕೋರಿದ್ದರು. ಆದರೆ ಬಾಲಕಿ ಗರ್ಭ ಧರಿಸಿ 32 ವಾರ (8 ತಿಂಗಳು)ಗಳಾಗಿವೆ. ಈಗ ಗರ್ಭಪಾತ ಮಾಡಿಸಿದರೆ ಆಕೆಯ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಹೆತ್ತವರ ಮನವಿಯನ್ನು ತಿರಸ್ಕರಿಸಿತ್ತು.
ಮಗುವನ್ನು ದತ್ತು ನೀಡಿ: ಸರಕಾರಿ ಆಸ್ಪತ್ರೆಯೊಂದರಲ್ಲಿ ಬಾಲಕಿ ಗುರುವಾರ ಹೆಣ್ಣು ಮಗು ಒಂದಕ್ಕೆ ಜನ್ಮ ನೀಡಿದ್ದಾಳೆ. ಮಗು 2.2 ಕೆ.ಜಿ. ತೂಕವಿದ್ದು, ದೇವರ ದಯೆಯಿಂದ ಬಾಲಕಿ ಕೂಡ ಸುರಕ್ಷಿತವಾಗಿದ್ದಾಳೆ. ಆದರೆ ಮಗುವಿನ ತೂಕ ಕೊಂಚ ಕಡಿಮೆ ಇರುವುದರಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ತಾನು ಮಗುವೊಂದಕ್ಕೆ ಜನ್ಮ ನೀಡಿರುವ ವಿಷಯ ಆ ಬಾಲಕಿಗೆ ಗೊತ್ತೇ ಇಲ್ಲ. ಆಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಹೆತ್ತವರು ಹೊಟ್ಟೆಯಲ್ಲಿ ಕಲ್ಲಿದೆ. ಅದಕ್ಕೆ ಡಾಕ್ಟರ್ ಆಪರೇಷನ್ ಮಾಡ್ತಾರೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ಕರೆತಂದಿದ್ದು, ಹೆರಿಗೆ ಅನಂತರ ಮಗುವನ್ನು ಆಕೆಯಿಂದ ದೂರ ಇಡಲಾಗಿದೆ. ಕೆಲವು ಸಮಯದ ಅನಂತರ ಎಚ್ಚರಗೊಂಡ ಬಾಲಕಿ ತನ್ನ ಹೊಟ್ಟೆ ಸಣ್ಣದಾಗಿರುವುದು ಕಂಡು, ಹೊಟ್ಟೆ ಸಮಸ್ಯೆ ಪರಿಹಾರವಾಯ್ತು ಎಂದು ಖುಷಿಯಾಗಿದ್ದಾಳೆ!