ಜೈಪುರ: ಪ್ರಿಯಕರನ ಮುಂದೆಯೇ ಅಪ್ರಾಪ್ತೆ ಯುವತಿಯ ಮೇಲೆ ಸಾಮೂಹಿಕವಾಗಿ ದೈಹಿಕ ದೌರ್ಜನ್ಯವಸೆಗಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಜೋಧ್ ಪುರದಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ಯುವತಿ ತನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ಓಡಿ ಬಂದಿದ್ದಾಳೆ. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ದೈಹಿಕ ದೌರ್ಜನ್ಯವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಹಿನ್ನೆಲೆ: ಶನಿವಾರ(ಜು.15 ರಂದು) ಅಜ್ಮೀರ್‌ನಿಂದ ತನ್ನ ಪ್ರಿಯಕರನ ಜೊತೆ 17 ವರ್ಷದ ಅಪ್ರಾಪ್ತೆ ಓಡಿ ಬಂದಿದ್ದಾಳೆ. ಅಲ್ಲಿಂದ ಬಸ್ಸೊಂದನ್ನು ಹಿಡಿದು ರಾತ್ರಿ 10:30 ರ ಸಮಯಕ್ಕೆ ಜೋಧ್ ಪುರಕ್ಕೆ ಬಂದು ತಲುಪಿದ್ದಾರೆ. ಆದಾದ ಬಳಿಕ ಗೆಸ್ಟ್ ಹೌಸ್ ವೊಂದಕ್ಕೆ ತಲುಪಿದ್ದಾರೆ. ಆದರೆ ಗೆಸ್ಟ್ ಹೌಸ್ ಸಿಬ್ಬಂದಿಯೊಬ್ಬ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣ, ಯುವ ಜೋಡಿ ಅಲ್ಲಿಂದ ಹೊರ ಬಂದಿದೆ. ಇದಾದ ನಂತರ ಇಬ್ಬರು ಪೌಟಾ ಚೌರಾಹಾಗೆ ಹೋಗಿದ್ದಾರೆ. ಅಲ್ಲಿ ಮೂವರು ಆರೋಪಿಗಳಾದ ಸಮಂದರ್ ಸಿಂಗ್ ಭಾಟಿ, ಧರ್ಮಪಾಲ್ ಸಿಂಗ್ ಮತ್ತು ಭಟ್ಟಮ್ ಸಿಂಗ್ (20-22 ವರ್ಷ) ಅವರನ್ನು ಅನಿರೀಕ್ಷಿತವಾಗಿ ಭೇಟಿ ಆಗಿದ್ದಾರೆ. ಆರೋಪಿಗಳು ಮೊದಲು ಜೋಡಿಗೆ ಅನ್ನ, ಆಹಾರವನ್ನು ನೀಡಿದೆ. ಆ ಬಳಿಕ ಅವರು ಓಡಿ ಬಂದಿರುವ ಬಗ್ಗೆ ಕೇಳಿದ್ದಾರೆ. ಸಹಾಯ ಮಾಡುತ್ತೇವೆ ಎಂದು, ಭಾನುವಾರ ಮುಂಜಾನೆ 4 ಗಂಟೆಯ ವೇಳೆಗೆ (ಜು.16 ರಂದು) ರೈಲ್ವೇ ಸ್ಟೇಷನ್ ಗೆ ಕರೆತರುವ ನೆಪದಲ್ಲಿ ಜೈ ನಾರಾಯಣ ವ್ಯಾಸ್ ವಿಶ್ವವಿದ್ಯಾಲಯದ ಹಾಕಿ ಗ್ರೌಂಡ್ ಗೆ ಇಬ್ಬರನ್ನು ಕರೆ ತಂದಿದ್ದಾರೆ. ನಂತರ ಪ್ರಿಯಕರನ ಮೇಲೆ ಹಲ್ಲೆಗೈದು ಆತನನ್ನು ಕಟ್ಟಿ ಹಾಕಿ, ಯುವತಿಯ ಮೇಲೆ ಸಾಮೂಹಿಕವಾಗಿ ದೈಹಿಕ ದೌರ್ಜನ್ಯವೆಸಗಿದ್ದಾರೆ. ಮುಂಜಾನೆ ವಾಕಿಂಗ್ ಮಾಡುವವರು ಬಂದ ವೇಳೆ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ. ವಾಕಿಂಗ್ ಹೋಗುವವರು ಘಟನೆ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಅಮೃತಾ ದುಹಾನ್ ಹೇಳಿದ್ದಾರೆ.
ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶ್ವಾನದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವೂ ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಜೋಧಪುರದ ರತನಾಡ ಸಮೀಪದ ಗಣೇಶಪುರದ ಮನೆಯೊಂದರಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಇಬ್ಬರು ಆರೋಪಿಗಳು ಪರಾರಿಯಾಗಲು ಯತ್ನಿಸಿ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಮೂವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಲ್ಲಿ ಸಮಂದರ್ ಸಿಂಗ್ ಜೆಎನ್‌ವಿಯುನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ, ಧರ್ಮ್ ಪಾಲ್ ಸಿಂಗ್ ಜೆಎನ್‌ವಿಯುನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಭಟ್ಟಮ್ ಸಿಂಗ್ ಅಜ್ಮೀರ್‌ನಿಂದ ಬಿಎಡ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರೊಂದಿಗೆ ಪೊಲೀಸರು ಗೆಸ್ಟ್ ಹೌಸ್ ಸಿಬ್ಬಂದಿ ಸುರೇಶ್ ಜಾಟ್ ಅವರನ್ನು ಕೂಡ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆರೋಪಿಗಳು ವಿದ್ಯಾರ್ಥಿ ಸಂಘದ ಚುನಾವಣೆಗೆ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಟಿಕೆಟ್‌ಗಾಗಿ ವಿದ್ಯಾರ್ಥಿ ನಾಯಕನಿಗೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಆರೋಪಿಗಳು ನಮ್ಮ ಸಂಘಟನೆಯ ಭಾಗವಲ್ಲ ಎಂದು ಎಬಿವಿಪಿ ಹೇಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.