ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಮೊದಲಾದ ಮಾತುಗಳು ಅಕ್ಷರಶಃ ಸತ್ಯ. ಒಂದು ಮನೆಯಲ್ಲಿ ಹೆಣ್ಣು ಕಲಿತರೆ ಆ ಮನೆಗೆ ಬೆಳಕಾಗುವಳು. ಸಮಾಜದ ಎಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಸಮಾಜವನ್ನೇ ಉದ್ಧರಿಸುವರು.
ಸಮಾಜದ ಪ್ರಗತಿಯ ರಥ ಸಾಗಬೇಕಾದರೆ ಗಂಡು-ಹೆಣ್ಣು ಎಂಬ ಎರಡು ಚಕ್ರಗಳು ಇರಲೇಬೇಕು. ರಥಕ್ಕೆ ಹೇಗೆ ಒಂದು ಚಕ್ರ ಇಲ್ಲವಾದರೆ ಚಲಿಸಲು ಸಾಧ್ಯವಿಲ್ಲವೋ ಸಮಾಜವೂ ಹಾಗೆಯೇ. ಪ್ರಕೃತಿಯೇ ಗಂಡು, ಹೆಣ್ಣಿಗೂ ಸಮಾನವಾದ ಸ್ಥಾನಮಾನವನ್ನು ನೀಡಿಬಿಟ್ಟಿದೆ. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ರಾಷ್ಟ್ರಕವಿ ಕುವೆಂಪು, ದೈಹಿಕವಾಗಿ ಗಂಡು-ಹೆಣ್ಣು ಎರಡು ಲಿಂಗಗಳನ್ನು ಕಾಣಬಹುದು, ಅಧ್ಯಾತ್ಮಿಕವಾಗಿ ಆತ್ಮಗಳಿಗೆ ಯಾವುದೇ ಲಿಂಗ ಭೇದವಿಲ್ಲ ಎಂದು ಹೇಳಿದ್ದಾರೆ.
ಪುರುಷನಷ್ಟೇ ಸಮಾನ ಸಾಮರ್ಥ್ಯ ಉಳ್ಳವಳು ಹೆಣ್ಣು. ಆದರೆ ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ, ಹೆಣ್ಣು ಗಂಡಿನ ಗುಲಾಮಳು, ಅವಳೇನಿದ್ದರೂ ಗಂಡು ಹೇಳಿದ ಹಾಗೆ ಕೇಳಬೇಕು ಎನ್ನುವ ಮನೋಭಾವನೆಯನ್ನು ಸ್ವಾರ್ಥಪರ ಪುರುಷರು ಹುಟ್ಟು ಹಾಕಿದ್ದರ ಪರಿಣಾಮವಾಗಿ ಹೆಣ್ಣು ಅವಮಾನಕ್ಕೊಳಗಾದಳು, ದೌರ್ಜನ್ಯಕ್ಕೊಳಗಾದಳು, ಅಬಲೆಯಾದಳು, ಪರಾವಲಂಬಿಯಾದಳು. ಇತ್ತೀಚೆಗೆ ನಡೆಯುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಕಂಡು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಘಟನೆಗಳು ನಮ್ಮ ಭಾರತಿಯ ಉನ್ನತ ಸಂಸ್ಕೃತಿಗೆ ಘೋರ ಅಪಮಾನವನ್ನು ಮಾಡುವಂತವಷ್ಟೇ ಅಲ್ಲ ಮಹಿಳೆಯ ಅಳಿವು ಉಳಿವಿನ ಪ್ರಶ್ನೆಯಂತೆ ತೋರುತ್ತವೆ.
ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಹೆಣ್ಣು ರಾಷ್ಟ್ರಪತಿಯಾಗುವುದು ಒಂದು ಸಾಧನೆಯಾದರೆ, ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದೂ ಕೂಡ ಸಾಧನೆಯೇ.
ಹೆಣ್ಣು ಪುರುಷನಂತೆಯೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕಾದರೆ ಅವಳಿಗೆ ಎದುರಾಗುವ ಮೊದಲ ಸವಾಲು ಕುಟುಂಬ. ಹೆಣ್ಣು ತಾಯಿಯಾಗಿ, ಮಡದಿಯಾಗಿ, ಸೊಸೆಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಕುಟುಂಬರೂಪಿಯಾದ ಹೆಣ್ಣು ಸಮಾಜ ರೂಪಿಯಾಗಿ ನಿಲ್ಲಬೇಕಾದರೆ ಕುಟುಂಬದವರ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಕುಟುಂಬದ ಸಹಕಾರ ದೊರೆತರೆ ಹೆಣ್ಣು ಯಾವ ಸಾಧನೆಯನ್ನು ಬೇಕಾದರೂ ಮಾಡಬಲ್ಲಳು ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳು ನಮ್ಮ ನಡುವೆಯೇ ಇವೆ.
-ಸಿಂಧೂರ್ ಗೌಡ
ವಿವಿ, ತುಮಕೂರು