Advertisement
ಸಿನಿಮಾ ಎನ್ನುವುದು ಬಿಂಬಗಳ ಭಾಷೆ ಎನ್ನುವುದು ಸರ್ವ ವೇದ್ಯ. ನಾವು ನೋಡಿದ ಸಿನಿಮಾ ಅನುಭವವಾಗಿ ತಲುಪಿ ನಂತರ ಅರ್ಥವಾಗಿ ದಕ್ಕುವಲ್ಲಿ ಬಿಂಬಗಳು ನಿರ್ವಹಿಸುವ ಪಾತ್ರ ಮಹತ್ವದ್ದು. ಕೆಲವು ಸಿನಿಮಾ ವ್ಯಾಖ್ಯಾನಕಾರರು ಹಾಗೂ ಕೃತಿಕಾರರು ಪರಿಭಾವಿಸುವಂತೆ ಬಿಂಬ ಮೂಡುವುದು ತೆರೆಯ ಮೇಲಲ್ಲ, ನೋಡುಗರ ಮನದ ಪಟಲದ ಮೇಲೆ ಎಂಬ ಆ್ಯಂಡೂ ಟ್ರೂ$Âಡರ್‌ನ ಮಾತು ಎಷ್ಟು ಸಮಂಜಸ. ತೆರೆಯ ಮೇಲೆ ಕಾಣಿಸುವುದು ದೃಶ್ಯ ಬಿಂಬಗಳು. ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿ ಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ. ಮೊದಲನೆಯ ಅಂಶಗಳು ಮೂರ್ತವಾಗಿ ತೆರೆಯ ಮೇಲಿನ ಪರಿಸರ ಕಟ್ಟಿಕೊಡುತ್ತಿದ್ದರೆ ಎರಡನೆಯ ಅಂಶಗಳು ಅಮೂರ್ತವಾಗಿ ಅದೇ ಕೆಲಸ ಮಾಡುತ್ತಿರುತ್ತವೆ. ಅವು ಕಟ್ಟಿ ಕೊಡುವ ಅನುಭವವು ಆನಂತರ ಸಹೃದಯರ ಮನದಾಳಕ್ಕಿಳಿದು ಅರ್ಥವಾಗಿ ಮೂಡಿ ಸಿನಿಮಾದ ರಾಜಕೀಯ, ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟುಗಳನ್ನು ಸಬಲಗೊಳಿಸುತ್ತವೆ. ಕಥಾನಕವನ್ನು ನಿರಚನ ಮಾಡುವುದರ ಮೂಲಕ ಸಿನಿಮಾದ ದರ್ಶನವನ್ನು ಗ್ರಹಿಸುವುದು ಒಂದು ಪರಿಯಾದರೆ, ಕತೆಯನ್ನು ಕಟ್ಟಲು ಬಳಸುವ ಬಿಂಬಗಳ ನಿರಚನೆ ಮಾಡಿ ಆ ಮೂಲಕ ಸಿನಿಮಾ ಕಟ್ಟುವ ಕತೆಯ ಒಳಹೊರಗನ್ನೆಲ್ಲಾ ವಿಶ್ಲೇಷಿಸಿ, ಅದರ ದರ್ಶನವನ್ನು ಗ್ರಹಿಸುವುದು ಇನ್ನೊಂದು ಪರಿ. ಗುರಿ ಒಂದೇ ಆದರೂ ಮಾರ್ಗ ಭಿನ್ನ.
Related Articles
Advertisement
ಚಿತ್ರ ಮಾಡುವಾಗ ನಾನು ಮೊದಲು ಗಮನಿಸುವುದು ಆ ಕಥೆಯು ನನ್ನ ನಿರೀಕ್ಷೆಯ ಪ್ರೇಕ್ಷಕನೊಂದಿಗೆ ಭಾವನಾತ್ಮಕ ಸ್ಪಂದನವನ್ನು ಸೃಷ್ಟಿಸಬಲ್ಲುದೇ ಎಂಬುದನ್ನು. ನಿರೀಕ್ಷೆಯ ಪ್ರೇಕ್ಷಕ ಎಂಬ ಕೇವಿಯಟ್ ತೆಗೆದುಕೊಳ್ಳಲು ಕಾರಣ ಎಲ್ಲ ಸಿನಿಮಾಗಳೂ, ಎಲ್ಲ ಕಾಲಕ್ಕೂ ಎಲ್ಲ ರೀತಿಯ ಪ್ರೇಕ್ಷಕರಿಗೂ ರುಚಿಸಲು ಸಾಧ್ಯವಿಲ್ಲ ಎಂಬ ನನ್ನ ನಂಬಿಕೆ. ಆ ಕಾಲ್ಪನಿಕ ಪ್ರೇಕ್ಷಕನಿಗೆ ಆ ಕಥಾ ಹಂದರ ಒಪ್ಪಿಗೆಯಾದೀತು ಅನ್ನಿಸಿದ ನಂತರ, ಮುಂದಿನ ಹೆಜ್ಜೆ ಅದನ್ನು ಸಾದರ ಪಡಿಸಲು ಬಳಸುವ ವಿನ್ಯಾಸ, ಆಕೃತಿ, ಬಂಧ ಯಾವುದಿರಬೇಕು ಎನ್ನುವುದು. ಸಿನಿಮಾ ಮಾಡುವಾಗ ಕಥಾಹಂದರದ ಬಗ್ಗೆ ತಿಂಗಳುಗಳ ಕಾಲ ಯೋಚಿಸುತ್ತಿರುವುದರಿಂದ ಅದೇ ಬಂಧದ ಸಾಧ್ಯತೆಯನ್ನು ತೋರಿಸಿ ಕೊಡುತ್ತದೆ. ಹೊರಗಿನಿಂದ ಎರವಲು ತಂದ ವಿನ್ಯಾಸ ಅಥವಾ ಪೂರ್ವನಿಶ್ಚಿತ ವಿನ್ಯಾಸವು ಕಥಾವಸ್ತು ಮತ್ತು ಅದರ ಬಂಧದ ನಡುವೆ ಸಾವಯವ ಸಂಬಂಧ ಹುಟ್ಟು ಹಾಕಲಾರದು. “ಘಟಶ್ರಾದ್ಧ’ದ ವಿಧ್ಯುಕ್ತ ಕ್ರಿಯೆಯೇ ಚಿತ್ರಕ್ಕೊಂದು ರೂಪನಿಷ್ಠ ಬಂಧವನ್ನು ಸೂಚಿಸಿದರೆ, “ತಬರನ ಕಥೆ’ಯ ವಸ್ತು ಒಂದು ಮುಕ್ತ ಬಂಧದ ಸ್ವರೂಪವನ್ನು ಸೂಚಿಸಿತು. ಚಿತ್ರದಲ್ಲಿ ಎರಡು ಪದರಗಳಲ್ಲಿ ಕತೆ ಬಿಚ್ಚಿಕೊಳ್ಳುತ್ತದೆ.
*
ಅನುಭವಗಳು ಮನುಷ್ಯನನ್ನು ರೂಪಿಸುತ್ತದೆ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಅದರಲ್ಲೂ ಬಾಲ್ಯದ ಅನುಭವದ ಸೆಲೆಗಳು ನೆನಪಾಗಿ ಉಳಿದು ಜೀವನದುದ್ದಕ್ಕೂ ದಾರಿ ತೋರಿಸುತ್ತಿರುತ್ತವೆ. ಬಾಲ್ಯದಲ್ಲಿ ಬರೀ ಅವಮಾನವೇ ತುಂಬಿದ್ದವರಿಗೆ ಈ ನೆನಪಿನ ಮಹತ್ವ ಏನಿರಬಹುದು? ಅವರು ಗತವನ್ನು ಮರೆಯಲು ಪ್ರಯತ್ನಿಸುತ್ತಿರುತ್ತಾರೆಯೇ? ಅಥವಾ ಗತದ ನೋವು ಪ್ರಸ್ತುತದಲ್ಲಿ ಸೆಣೆಯಾಗಿ, ಪ್ರತೀಕಾರದ ನಿರೀಕ್ಷೆಯಲ್ಲಿ ಬೆಳೆಯುತ್ತಿರುತ್ತದೆಯೇ? ಮನುಷ್ಯ ಅನುಭವಿಸುವ ಅವಮಾನ, ನೋವುಗಳು ಕಾಲಾಂತರದಲ್ಲಿ ಬೆಳೆದು ಹಲವು ರೂಪಗಳಲ್ಲಿ ಪ್ರಕಟವಾಗುತ್ತಾ ಇರುತ್ತವೆ. ಈ ಅವಮಾನ ನುಂಗಿ ಮನಸ್ಸನ್ನು ನಿರ್ಮಲ ಮಾಡಿಕೊಂಡರೆ ವ್ಯಕ್ತಿಯಾಗಿ ಬೆಳೆಯಬಹುದು, ಆದರೆ ಆ ಅವಮಾನಕ್ಕೆ ಪ್ರತಿಕ್ರಿಯಿಸಿ ಅದಕ್ಕೆ ಮೂಲವಾದ ತರತಮ ಉಳ್ಳ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವತ್ತ ಹೆಜ್ಜೆ ಹಾಕಿದರೆ ಸಮುದಾಯವೇ ಬೆಳೆಯುತ್ತದೆ. ಕೆಲವರು ತಮ್ಮ ಭೂತವನ್ನು ಮರೆತರೆ, ಕೆಲವರು ಕಾಪಿಡುತ್ತಾರೆ. ಮರೆಯುವ ಮತ್ತು ಕಾಪಿಡುವ ಪ್ರಕ್ರಿಯೆಗಳು ಸಹಜವಾದ ಮನೋವೃತ್ತಿಯೇ ಅಥವಾ ಉದ್ದೇಶಪೂರ್ವಕವೇ ಎಂದು ಯೋಚಿಸುತ್ತ ಹೋದಂತೆ ಇದನ್ನೇ ಪ್ರಧಾನ ಆಶಯವಾಗಿ ಬಳಸಿ ಒಂದು ಚಿತ್ರ ಮಾಡಬೇಕೆನ್ನಿಸಿತು. ಹಾಗಾಗಿ ಕಥೆಗಾರ, ಕವಿ ಜಯಂತ ಕಾಯ್ಕಿಣಿಯವರ ಕಥೆಯ ಆಧರಿಸಿದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ರೂಪುಗೊಂಡಿತು.