ಚಾಮರಾಜನಗರ: ಗಿರಿಜನರು ಹಾಗೂ ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಹೆಚ್ಚಿನ ಅನುದಾನ ಹಾಗೂ ವಿಶೇಷ ಯೋಜನೆ ನೀಡಿದ್ದು ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣರನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಮನವಿ ಮಾಡಿದರು.
ತಾಲೂಕಿನ ಪುಣಜನೂರು ಗ್ರಾಮದ ಪಂಚಾಯ್ತಿ ವ್ಯಾಪ್ತಿಯ ಕುಳ್ಳೂರು, ಬಾಣವಾಡಿ, ಬೂದಿಪಡಗ, ಚಿಕ್ಕಮೂಡಹಳ್ಳಿ, ಗೋಡೆ ಮಡುವಿನ ದೊಡ್ಡಿ ಸೇರಿದಂತೆ ಅನೇಕ ಗ್ರಾಮಗಳು, ಗಿರಿಜನರು ವಾಸಿಸುವ ಪೋಡುಗಳು ಮತ್ತು ಲಂಬಾಣಿ ತಾಂಡಾಗಳಿಗೆ ತೆರಳಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಪರ ಮತಯಾಚನೆ ಮಾಡಿದರು.
ಗಿರಿಜನರ ವಾಸಿಸುವ ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ, ಕುಡಿಯುವ ನೀರು, ವಾಸದ ಮನೆ ಸೇರಿ ಹತ್ತು ಹಲವು ಸೌಲಭ್ಯ ಕಲ್ಪಿಸಿದೆ. ಗಿರಿಜನರ ಅರಣ್ಯ ಹಕ್ಕು ರಚನೆಗಾಗಿ ಸಂಸದ ಆರ್.ಧ್ರುವನಾರಾಯಣ, ಸಚಿವರಾದ ಸಿ. ಪುಟ್ಟರಂಗಶೆಟ್ಟರು ಬದ್ಧರಾಗಿದ್ದು, ಅವರನ್ನು ಹೆಚ್ಚಿನ ಬಹುಮತದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಳೆದ 10 ವರ್ಷಗಳ ಅವಧಿಯಲ್ಲಿ ಉತ್ತಮ ಯೋಜನೆ ಜಾರಿ ಮಾಡಿರುವ ಅವರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ, ಕಾನೂನು ಕಾಲೇಜು, ಕೃಷಿ ಕಾಲೇಜು ಮಂಜೂರು, ಎಂಜಿನಿಯರಿಂಗ್, ಮೆಡಿಕಲ್ ಏಕಲವ್ಯ, ಕೇಂದ್ರೀಯ ವಿದ್ಯಾಲಯ ಕಾಲೇಜು ಆರಂಭ ಸೇರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ರೈತರು ಹಾಗೂ ಬಡವರ ಏಳಿಗೆಗೆ ದುಡಿಯುತ್ತಿರುವ ಧ್ರುವನಾರಾಯಣ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಹೆಚ್ಚಿನ ಅಸಕ್ತಿ ವಹಿಸಿ, ಶ್ರಮಿಸುತ್ತಿದ್ದಾರೆ. ಇಂತಹ ಅದರ್ಶ ಸಂಸದರನ್ನು ಮತ್ತೂಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಎಸ್.ಸೋಮನಾಯಕ, ತಾಪಂ ಮಾಜಿ ಸದಸ್ಯ ಆರ್.ಮಹದೇವ್, ಲಂಬಾಣಿ ತಾಂಡಾಗಳ ಅಭಿವೃದ್ಧಿಗಾಗಿ ಕಾಂಗ್ರೆಸ್ ಬದ್ಧವಾಗಿದ್ದು, ಕ್ರಿಯಾಶೀಲ ಸಂಸದರಾಗಿರುವ ಧ್ರುವನಾರಾಯಣ ಅವರನ್ನು ಮತ್ತೂಮ್ಮೆ ಆಯ್ಕೆ ಮಾಡಿದರೆ, ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಕೇಂದ್ರದಲ್ಲಿ ವಿಶೇಷ ಯೋಜನೆ ಅನುಷ್ಠಾನ ಮಾಡಲಿದ್ದಾರೆಂದರು.
ತಾಪಂ ಸದಸ್ಯ ಪಿ.ಕುಮಾರನಾಯ್ಕ, ಪುಣಜನೂರು ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷ ಶಾಮಿರ್ ಪಾಷಾ, ಉಪಾಧ್ಯಕ್ಷ ಶಿವುನಾಯಕ್, ಜಡೆಯಪ್ಪ, ಗ್ರಾಪಂ ಸದಸ್ಯ ರತ್ನಮ್ಮ, ಮಣಿ ನಾಯ್ಕ, ನಾಯನಾಯಕ್, ಪ್ರಕಾಶ್‌ನಾಯ್ಕ, ಮಹದೇವ್, ಚನ್ನಂಜೇಗೌಡ, ಮುಖಂಡರಾದ ಅರುಣ್‌ಕುಮಾರ್, ಶಿವರಾಜು, ಮೂಡಹಳ್ಳಿ ರಾಜಪ್ಪ, ಪಿಎಸಿಸಿ ಸದಸ್ಯ ನಾಗನಾಯಕ, ಸಣ್ಣಕ್ಕಿಗೌಡ, ರವಿ ಇದ್ದರು.