Advertisement

ಗಿರಿಜಕ್ಕನ ಹೋಟೆಲಲ್ಲಿ ಗರಿಗರಿ ಮಂಡಕ್ಕಿ

06:05 AM Dec 17, 2018 | |

ಕೆಲವರು ಎಷ್ಟೇ ಶ್ರೀಮಂತರಾಗಿದ್ರೂ ಹೊರಗಡೆ ಹೋದಾಗ ರಸ್ತೆ ಬದಿಯಲ್ಲಿರುವ ಸಣ್ಣ ಪುಟ್ಟ ಹೋಟೆಲ್‌ನಲ್ಲಿ ತಿಂಡಿ ತಿನ್ನುವುದಕ್ಕೆ ಇಷ್ಟ ಪಡುತ್ತಾರೆ. ಏಕೆಂದರೆ,  ಅಲ್ಲಿ ಸಿಗುವ ತಿಂಡಿ ಸ್ಟಾರ್‌ ಹೋಟೆಲ್‌ ತಿನಿಸಿನ ರುಚಿಯನ್ನೂ ಮೀರಿಸುತ್ತದೆ. ಇಂತಹುದೇ ಒಂದು ಹೋಟೆಲ್‌ ಇಟ್ಟಿಗುಡಿ ಗ್ರಾಮದಲ್ಲಿದೆ.

Advertisement

ದಾವಣಗೆರೆಯಿಂದ ಮೈಲಾರಕ್ಕೆ ಹೋಗುವ ರಸ್ತೆಯಲ್ಲಿ ಇರುವ ಈ ಗ್ರಾಮದ ಬಸ್‌ ನಿಲ್ದಾಣದ ಎದುರು ಯಾವುದೇ ದೊಡ್ಡ ಟೇಬಲ್‌, ಚೇರು, ಹೆಸರಿನ ಬೋರ್ಡ್‌ ಇಲ್ಲ, ಚಪ್ಪರ ಹಾಕಿರುವ ಸಣ್ಣ ಮನೆಯಂತೆ ಕಾಣುವ ಈ ಹೋಟೆಲ್‌ 40 ವರ್ಷ ಹಳೆಯದು.

ಮನೆಯಲ್ಲಿ ತೀರಾ ಬಡತನವಿದ್ದ ಸಮಯದಲ್ಲಿ ತನ್ನ ಮಕ್ಕಳೊಂದಿಗೆ ಬೈರಾಪುರದಿಂದ 5 ಕಿ.ಮೀ. ದೂರದ ಇಟ್ಟಿಗುಡಿಗೆ ಬಂದ ಸೋಮವ್ವ ಎಂಬಾಕೆ ಪುಟ್ಟ ಗುಡಿಸಲು ಕಟ್ಟಿಕೊಂಡು ಹೋಟೆಲ್‌ ಪ್ರಾರಂಭಿಸಿದ್ದರು. ಇದರಲ್ಲಿ ಸಂಪಾದಿಸಿದ ಹಣದಲ್ಲಿ ಮೊಮ್ಮಳನ್ನು ಓದಿಸಿದ್ದೂ ಅಲ್ಲದೆ, ಜಮೀನು, ನಿವೇಶನ ಪಡೆದು ಮಕ್ಕಳಿಗೆ ಆಧಾರ ಮಾಡಿದ್ದಾರೆ. ಈ ಮನೆಗೆ ಸೊಸೆಯಾಗಿ ಬಂದ ಗಿರಿಜಮ್ಮ, ಈ ಹೋಟೆಲ್‌ಅನ್ನು ಮತ್ತಷ್ಟು ವಿಸ್ತರಿಸಿದರು. ಈಗ ಇವರ ಮಗ ಸಂತೋಷ್‌ ಹಾಗೂ ಸೊಸೆ ಸುಧಾ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

15 ವರ್ಷಗಳ ಹಿಂದೆ ಪತಿ ಮೃತಪಟ್ಟ ನಂತರ ಮನೆಯ ಜವಾಬ್ದಾರಿ ಹೊತ್ತ ಗಿರಿಜಮ್ಮ ಈ ಪುಟ್ಟ ಗುಡಿಸಲಿನಲ್ಲಿ  ಗ್ರಾಹಕರಿಗೆ ರುಚಿಯಾದ ತಿಂಡಿ ಮಾಡಿಕೊಡುತ್ತಾ ಅಕ್ಕಪಕ್ಕದ ಗ್ರಾಮಸ್ಥರಿಗೂ ಚಿರಪರಿಚಿತರಾದರು. ಹೀಗಾಗಿ ಇದು ಗಿರಿಜಕ್ಕನ ಹೋಟೆಲ್‌ ಎಂದೇ ಹೆಸರಾಗಿದೆ.

ಬೆಳಗ್ಗಿನ ಉಪಾಹಾರ:
ಬೆಳಗ್ಗೆ 4 ಗಂಟೆಗೆ ಆರಂಭವಾಗುವ ಈ ಹೋಟೆಲ್‌ನಲ್ಲಿ 11 ಗಂಟೆವರೆಗೂ ಇಡ್ಲಿ, ವಡೆ, ಪೂರಿ, ದೋಸೆ ಜೊತೆಗೆ ಟೀ ಕಾಫಿ ಸಿಗುತ್ತದೆ. 15 ರೂ. ಕೊಟ್ರೆ 5 ಇಡ್ಲಿ, ದೋಸೆ(ಗ್ರಾತದಲ್ಲಿ ದೊಡ್ಡದು)ಯಾದ್ರೆ ಎರಡು ಕೊಡುತ್ತಾರೆ. 30 ರೂ. ಕೊಟ್ರೆ 5 ಇಡ್ಲಿ ಜತೆ, ಗರಿಗರಿಯಾದ ರುಚಿಯಾದ ಎರಡು ಮೆಣಸಿನಕಾಯಿ ಬಜ್ಜಿ, ಟೀ ಅಥವಾ ಕಾಫಿ ಸಿಗುತ್ತದೆ. ತಿಂಡಿ ಜತೆ ಕೊಡುವ ಶೇಂಗಾ ಚಟ್ನಿ ಹಾಗೂ (ಮಸೆದಿದ್ದು)ಸೊಪ್ಪಿನ ಸಾರು, ಬೇಳೆ ಸಾರು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

Advertisement

ಮಧ್ಯಾಹ್ನ 12ರ ನಂತರ ದಾವಣಗೆರೆ ಜಿಲ್ಲೆಯ ಮಿರ್ಚಿ ಮಂಡಿಕ್ಕಿ ಸಿಗುತ್ತದೆ. ಖಾರ ಮಂಡಕ್ಕಿ, ಸೂಸ್ಲ (ಒಗ್ಗರಣೆ ಮಂಡಕ್ಕಿ), ನರ್ಗೀಸ್‌, ಒಗ್ಗರಣೆ ಹಾಕಿದ ಅವಲಕ್ಕಿ ಯಾವುದೇ ತೆಗೆದುಕೊಂಡ್ರೂ ಒಂದು ಪ್ಲೇಟ್‌ಗೆ 15 ರೂ. ಇದರ ಜತೆ ಎರಡು ಮೆಣಸಿನಕಾಯಿ ಬಜ್ಜಿ ಅಥವಾ ವಡೆ ಕೂಡ ಕೊಡ್ತಾರೆ.  

ಆರ್ಡರ್‌ ಕೊಟ್ರೆ ಊಟ ಸಿಗುತ್ತೆ:

ಈ ಹೋಟೆಲ್‌ನಲ್ಲಿ ಊಟವೂ ಸಿಗುತ್ತದೆ. ಯಾರಾದ್ರೂ ಮೊದಲೇ ಆರ್ಡರ್‌ ಕೊಟ್ರೆ ಊಟನೂ ಮಾಡಿಕೊಡುತ್ತಾರೆ. ಹಳ್ಳಿಯಾಗಿರುವ ಕಾರಣ, ಊಟಕ್ಕಿಂತ ಮಂಡಕ್ಕಿ ಕೇಳ್ಳೋದು ಜಾಸ್ತಿ. ಹೀಗಾಗಿ ಮಧ್ಯಾಹ್ನ ಊಟ ವ್ಯವಸ್ಥೆ ಮಾಡಿಲ್ಲ ಎನ್ನುತ್ತಾರೆ ಸಂತೋಷ್‌. ಅಜ್ಜಿ ಹಾಗೂ ಅಮ್ಮನ ಕೈಯಲ್ಲಿ ಪಳಗಿರುವ ಸಂತೋಷ್‌ ಹಾಗೂ ಇತನ ಪತ್ನಿ ಸುಧಾ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿರುವ ರುಚಿಯನ್ನು ಮುಂದುವರಿಸುತ್ತಿದ್ದಾರೆ.

ಹೋಟೆಲ್‌ ಸಮಯ:ಮುಂಜಾನೆ 4 ಗಂಟೆಗೆ ಪ್ರಾರಂಭವಾದ್ರೆ ರಾತ್ರಿ 6 ಗಂಟೆಯವರೆಗೂ ತೆರೆದಿರುತ್ತದೆ. ಹಬ್ಬದಲ್ಲಿ ಮಾತ್ರ ರಜೆ. ಉಳಿದಂತೆ ಎಲ್ಲಾ ದಿನಗಳಲ್ಲೂ ಓಪನ್‌ ಇರುತ್ತೆ.

ಹೋಟೆಲ್‌ ವಿಳಾಸ: ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿಗೆ ಸೇರಿರುವ ಇಟ್ಟಿಗುಡಿ ಗ್ರಾಮದ ಮೈಲಾರಕ್ಕೆ ಹೋಗುವ ರಸ್ತೆಯಲ್ಲೇ ಈ ಹೋಟೆಲ್‌ ಇದೆ. 

– ಭೋಗೇಶ ಎಂ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next