ಹುಣಸೂರು: ಆದಿವಾಸಿ ಯುವ ಜನರು ಮುಖ್ಯವಾಹಿನಿಗೆ ಬರಲು ಹಾಗೂ ಇತರ ಸಮುದಾಯಗಳೊಡನೆ ಬೆರೆತು ಸಹಬಾಳ್ವೆ ನಡೆಸಲು ಶಿಕ್ಷಣದೊಂದಿಗೆ ತಾಂತ್ರಿಕ ಕೌಶಲ್ಯ ತರಬೇತಿ ಪಡೆಯಬೇಕು ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಸಲಹೆ ನೀಡಿದರು.
ನಗರದ ಚಿಕ್ಕ ಹುಣಸೂರಿನ ಡೀಡ್ ಸಂಸ್ಥೆಯು ಸ್ವಿಜರ್‌ಲಾಂಡನ್‌ನ ಸಿಯೋ ಕಿಡ್ಸ್ ಸಂಸ್ಥೆಯ ಆಶ್ರಯದಲ್ಲಿ ವಿವಿಧ ಕೌಶಲ್ಯಗಳ ತರಬೇತಿ ಪಡೆದ ಆದಿವಾಸಿ ಯುವಜನರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಡು ಕುಡಿಗಳಲ್ಲಿ ಅಗಾಧ ಪ್ರತಿಭೆ ಅಡಗಿದ್ದು, ಇವರಿಗೆ ಕೌಶಲ್ಯ ತರಬೇತಿ ನೀಡಿದರೆ ಇತರರಿಗೆ ಪೈಪೋಟಿ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಡೀಡ್ ಸಂಸ್ಥೆಯು ಕಳೆದ 15 ತಿಂಗಳಿನಿಂದ ಸಿಯೋ ಕಿಡ್ಸ್ ಫೌಂಡೇಷನ್ ನೆರವಿನೊಂದಿಗೆ 126 ಆದಿವಾಸಿ ಯುವಕ-ಯುವತಿಯರಿಗೆ ಕಂಪ್ಯೂಟರ್, ಟೈಲರಿಂಗ್, ಡ್ರೈವಿಂಗ್ ತರಬೇತಿ ನೀಡಿದ್ದು, ಈ ಪೈಕಿ 48 ಮಂದಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದರು.
ಸಿಯೋ ಕಿಡ್ಸ್ ಫೌಂಡೇಷನ್ ಅಧ್ಯಕ್ಷ ಫಿಲಿಫ್ ಮಾತನಾಡಿ, ಡೀಡ್ ಸಂಸ್ಥೆ ಸಹಭಾಗ್ವಿತದಲ್ಲಿ ಗಿರಿಜನ ನಿರುದ್ಯೋಗಿಗಳಿಗೆ ತಾಂತ್ರಿಕತೆ ತರಬೇತಿ ನೀಡಲು ಸುಸಜ್ಜಿತ ತಾಂತ್ರಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಬೆಂಬಲ ನೀಡಿದ್ದೇವೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ಆದಿವಾಸಿ ಯುವಜನರು ತಾಂತ್ರಿಕ ಕೌಶಲ್ಯ ತರಬೇತಿ ಪಡೆದು ತಮ್ಮ ಬದುಕು ಕಟ್ಟಿಕೊಳ್ಳುವುದು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಆದಿವಾಸಿ ಕಲಾತಂಡಗಳು ಹಾಗೂ ಸ್ವಿಜರ್‌ಲಾಂಡ್‌ನ ವೇವ್‌ಗಾರ್ಡ್ ಕಲಾ ತಂಡಗಳು ಆಕರ್ಷಕ ನೃತ್ಯ ಹಾಗೂ ಸಂಗೀತ ಪ್ರದರ್ಶನ ನೀಡಿದವು. ಸಮಾರಂಭದಲ್ಲಿ ಸಿಯೋ ಕಿಡ್ಸ್ ಫೌಂಡೇಷನ್ ನಿರ್ದೇಶಕ ಅಲೆಗ್ಸಾಂಡರ್, ಡೀಡ್ ಸಂಸ್ಥೆ ಅಧ್ಯಕ್ಷ ಹರ್ಷ, ಪರಿವರ್ತನ ಸಂಸ್ಥೆಯ ಜಿ.ಎಸ್.ರಾಜೇಗೌಡ, ನಿವೃತ್ತ ಪ್ರೊ.ಎಚ್.ಆರ್.ಸಿದ್ದೇಗೌಡ, ತರಬೇತಿ ನಿರ್ವಾಹಕರಾದ ಆಶೋಕ್, ಪ್ರಕಾಶ್, ತರಬೇತಿ ಸಿಬ್ಬಂದಿ ಹಾಗೂ ಆದಿವಾಸಿ ಮುಖಂಡರು ಪಾಲ್ಗೊಂಡಿದ್ದರು.