ಧಾರವಾಡ: ಗಿರಡ್ಡಿ ಗೋವಿಂದರಾಜ್ ಫೌಂಡೇಶನ್ ವತಿಯಿಂದ ಡಾ| ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿ ಪ್ರದಾನ ಸಮಾರಂಭ ರಂಗಾಯಣ ಆವರಣದ ಸುವರ್ಣ ಸಾಂಸ್ಕೃತಿಕ ಸಮುತ್ಛಯದಲ್ಲಿ ಗುರುವಾರ ಜರುಗಿತು. ಪ್ರಶಸ್ತಿ ಪುರಸ್ಕೃತ ಕೃತಿಯಾದ “ಪಠ್ಯದ ಭವಾವಳಿ’ ಲೇಖಕ ಕಲಬುರಗಿಯ ಡಾ|ವಿಕ್ರಮ ವಿಸಾಜಿ ಅವರಿಗೆ 25 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಡಾ|ವಿಕ್ರಮ ವಿಸಾಜಿ ಮಾತನಾಡಿ, ಇತ್ತೀಚಿನ ಕನ್ನಡದ ವಿಮರ್ಶಕರಲ್ಲಿ ವಿಮರ್ಶೆಯ ವಿಸ್ಮಯವಿಲ್ಲ. ಒಂದು ವಿಷಯದ ಬಗ್ಗೆ ಚಿಂತನೆ ಪಲ್ಲಟ ಮಾಡುವ ಹಾಗೂ ಸೈದ್ಧಾಂತಿಕ ದಕ್ಷತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.
ಕವಿತೆ, ಪ್ರಬಂಧ, ವಿಮರ್ಶೆ ಹಾಗೂ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ತೊಡಗಿಸಿಕೊಳ್ಳುವ ಪ್ರಮಾಣದ ಮೇಲೆ ಬರವಣಿಗೆ ಸೃಷ್ಟಿಯಾಗುತ್ತದೆ. ಆದರೆ, ನನ್ನ ಸಮಕಾಲೀನ ವಿಮರ್ಶೆ ದಣಿವಿಗೆ ಒಳಗಾಗಿದೆ ಎನ್ನುವ ಭಾವನೆ ಕಾಡುತ್ತಿದೆ. ಇದಕ್ಕೆ ಸಾಮಾಜಿಕ, ರಾಜಕೀಯ ತಿಳಿವಳಿಕೆ ಅತಿಯಾಗಿ ಪಠ್ಯದ ಮೇಲೆ ಹೇರುತ್ತಿರುವುದು ಒಂದು ಕಾರಣವಾಗಿರಬಹುದು ಎಂದು ಹೇಳಿದರು.
ಮನುಷ್ಯನಾಗಿ, ಕಲಾವಿದನಾಗಿ ಹಾಗೂ ಬುದ್ಧಿಜೀವಿಯಾಗಿ ವಿಮರ್ಶಕನಿರಬೇಕು. ಅಂದಾಗ ಮಾತ್ರ ವಿಮರ್ಶೆಯ ವಿಸ್ಮಯ ಹುಟ್ಟುತ್ತದೆ. ಜೀವನದ ಅನುಭವಗಳನ್ನು ಕಲೆಯ ಅನುಭವವಾಗಿ, ಸತ್ಯದ ಅನುಭವವನ್ನು ಕಲೆಯ ಅನುಭವವಾಗಿ ತೆಗೆದುಕೊಂಡಾಗ ಮಾತ್ರ ಉತ್ತಮ ವಿಮರ್ಶಕನಾಗುತ್ತಾನೆ. ಡಾ|ಗಿರಡ್ಡಿ ಗೋವಿಂದರಾಜ ಅವರ ಬರವಣಿಗೆಯಲ್ಲಿನ ಪ್ರಾಮಾಣಿಕತೆ, ಬದ್ಧತೆ, ಶಿಸ್ತು ಈಗಿನ ವಿಮರ್ಶಕರಿಗೆ ಮಾದರಿಯಾಗಿದೆ ಎಂದರು.
ಧಾರವಾಡದ ವಿಮರ್ಶಾಪರಂಪರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಚಿಂತಕ ಡಾ| ರಾಜೇಂದ್ರ ಚೆನ್ನಿ ಮಾತನಾಡಿ, ಧಾರವಾಡ ನವೋದಯ ಕಾಲದಿಂದ ಹಿಡಿದು ಇಲ್ಲಿಯವರೆಗೂ ವಿಮರ್ಶಾ ಪರಂಪರೆ ಹೊಂದಿದೆ. ಇಲ್ಲಿ ಬಹುಮುಖೀ ಸಾಂಸ್ಕೃತಿಕತೆ ಇರುವುದರಿಂದ ಧಾರವಾಡಕ್ಕೆ ಪ್ರತ್ಯೇಕ ವಿಮರ್ಶಾ ಪರಂಪರೆಯನ್ನು ಒಪ್ಪಬಹುದು. ವಿಮರ್ಶೆಯಲ್ಲಿ ಅತೀ ಸಂದೇಹ, ಸಂಶಯದ ಕಾಲವಿದು. ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ನಂಬಿಕೆಯನ್ನು ತೆಗೆದು ಹಾಕುವ ವಿದ್ಯಮಾನಗಳು ನಡೆಯುತ್ತಿವೆ. ಇದು ಬರೀ ರಾಜಕೀಯ ಮಾತ್ರವಲ್ಲದೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಉತ್ತಮ ವಿಮರ್ಶೆ ಗುರುತಿಸುವುದು ಕಷ್ಟವಾಗಿದೆ ಎಂದು ಹೇಳಿದರು.
ಡಾ| ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಅಧ್ಯಕ್ಷ ಡಾ| ವೆಂಕಟೇಶ ಮಾಚಕನೂರ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತ ಕೃತಿ “ಪಠ್ಯದ ಭವಾವಳಿ’ ಕುರಿತು ಪ್ರೊ|ರಾಘವೇಂದ್ರ ಪಾಟೀಲ ಮಾತನಾಡಿದರು. ಸಾಹಿತಿ ಬಾಳಣ್ಣ ಶೀಗಿಹಳ್ಳಿ, ಸರೋಜಾ ಗಿರಡ್ಡಿ ಇದ್ದರು. ಶಶಿಧರ ತೋಡ್ಕರ ಪರಿಚಯಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಸುನೀಲ ಗಿರಡ್ಡಿ ವಂದಿಸಿದರು.